ದಿಗಂತ ವರದಿ ಬೆಂಗಳೂರು:
ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ಕರ್ನಾಟಕದ ಚಾರಣಿಗರ ತಂಡವೊಂದು ಅಲ್ಲಿನ ಪ್ರತಿಕೂಲ ವಾತಾವರಣದಲ್ಲಿ ಸಿಲುಕಿದ್ದು, ಪ್ರಾಣಾಪಾಯದಲ್ಲಿದೆ.
ಈ ಚಾರಣಿಗರ ತಂಡ ಉತ್ತರಾಖಂಡದ ಅತೀ ಎತ್ತರದ ಸಹಸ್ತ್ರತಾಲ್ ಚಾರಣಕ್ಕೆ ತೆರಳಿತ್ತು. ಈ ವೇಳೆ ಮಯಳಿ ಎಂಬಲ್ಲಿ ಪ್ರತಿಕೂಲ ವಾತಾವರಣದಲ್ಲಿ ಸಿಲುಕಿಕೊಂಡಿದೆ. ಪ್ರಸ್ತುತ ಕೆಲವರು ಕೊಖ್ಲಿ ಶಿಬಿರದಲ್ಲಿದ್ದಾರೆ.
ಈ ಮಾಹಿತಿ ನಿನ್ನೆ ರಾತ್ರಿ ನಮಗೆ ಲಭಿಸಿದೆ. ಸಂಕಷ್ಟದಲ್ಲಿರುವ ಚಾರಣಿಗರನ್ನು ರಕ್ಷಿಸುವ ಸಲುವಾಗಿ ನಾವು ಈಗಾಗಲೇ ಉತ್ತರಾಖಂಡ ಸರ್ಕಾರ ಮತ್ತು ಭಾರತ ಸರ್ಕಾರದ ಗೃಹ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಚಾರಣಿಗರ ರಕ್ಷಣೆಗಾಗಿ ಇಂದು ಬೆಳಗ್ಗೆ ಉತ್ತರಕಾಶಿ ತಲುಪಲಿದೆ. ಇದಲ್ಲದೆ, ಇಂದು ಬೆಳಗ್ಗೆ ವಿಪತ್ತು ನಿರ್ವಹಣಾ ಪಡೆ ಭೂ ಮಾರ್ಗವಾಗಿ ಶಿಬಿರದ ಬಳಿಗೆ ತೆರಳಲು ಪ್ರಾರಂಭಿಸಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಚಾರಣಿಗರನ್ನು ರಕ್ಷಿಸಲು ಕರ್ನಾಟಕ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಈಗಾಗಲೇ ಪ್ರಾರಂಭಿಸಿದೆ ಎಂದವರು ಮಾಹಿತಿ ನೀಡಿದ್ದಾರೆ