ಉತ್ತರಾಖಂಡ ಹಿಮಪಾತ: ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಸಾವು

ಹೊಸದಿಗಂತ ವರದಿ, ಶಿರಸಿ:

ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯದಿಂದ ಹಲವು ಚಾರಣಿಗರು ಸಾವು ಕಂಡಿದ್ದು, ಆ ಚಾರಣಿಗರಲ್ಲಿ ಶಿರಸಿ ತಾಲೂಕಿನ ಜಾಗನಹಳ್ಳಿಯ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಟ್ರೆಕ್ಕಿಂಗ್ ಗೈಡ್‌ಗಳಾಗಿ ಉತ್ತರ ಕಾಶಿಯ ಮೂವರು ನಿವಾಸಿಗಳ ಜತೆ ಬೆಂಗಳೂರಿನಿಂದ 18, ಪುಣೆಯಿಂದ ಒಬ್ಬರು ಜೊತೆ ತೆರಳಿದ್ದರು. ಇವರೊಂದಿಗೆ ತಾಲೂಕಿನ ಜಾಗನಹಳ್ಳಿ ಮೂಲದ ಬೆಂಗಳೂರು ನಿವಾಸಿ, ಗೂಗಲ್ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದ ಪದ್ಮಿನಿ ಹೆಗಡೆ (35) ಸಾವಿಗೀಡಾದ ದುರ್ದೈವಿ.

ಪದ್ಮಿನಿ ಹೆಗಡೆ ಅವರು ಕೆಲವು ವರ್ಷಗಳಿಂದ ಚಾರಣದಲ್ಲಿ ಆಸಕ್ತಿ ಹೊಂದಿದ್ದರು. ಮೇ 29ರಿಂದ ಜೂನ್ 7ರವರೆಗೆ ಭಟವಾಡಿ ಮಲ್ಲಾ – ಸಿಲ್ಲಾ ಕುಶಕಲ್ಯಾಣ ಸಹಸ್ರತಾಲ್ ಟ್ರೆಕ್ಕಿಂಗ್‌ಗೆ ಅನುಮತಿ ಪಡೆದ ತಂಡದೊಂದಿಗೆ ಪದ್ಮಿನಿ ತೆರಳಿದ್ದರು.
ಜೂ. 4ರಂದು ಮಧ್ಯಾಹ್ನದ ಸಮಯಕ್ಕೆ ಅಲ್ಲಿನ ಹವಾಮಾನ ಸರಿಯಾಗಿಲ್ಲದಿರುವ ಕುರಿತು ಪದ್ಮಿನಿ ತಮ್ಮ ತಾಯಿಗೆ ಮೆಸೆಜ್ ಹಾಕಿದ್ದರು.

ಪದ್ಮಿನಿ ಅವರ ತಂದೆ ಶ್ರೀಪತಿ ಹೆಗಡೆ ಅವರು ನಿಧನರಾಗಿದ್ದಾರೆ. ತಾಯಿ ಶೈಲಾ ಹೆಗಡೆ ಅವರು ಮುಂಬೈನಲ್ಲಿ ತಮ್ಮ ಮೊದಲ ಮಗಳ ಜತೆ ವಾಸ ಮಾಡುತ್ತಿದ್ದಾರೆ. ಇವರು ಕೂಡ ತಾಯಿ ಹಾಗೂ ಅಕ್ಕನ ಜತೆ ವಾಸವಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದರು ಎನ್ನುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ನಾಲ್ವರು ಸೇರಿ 9 ಮಂದಿ ಚಾರಣಿಗರು ನಾಪತ್ತೆಯಾಗಿದ್ದರು. ಅವರಲ್ಲಿ ಬೆಂಗಳೂರಿನ ಸುಜಾತ (52), ಚಿತ್ರಾ (48), ಸಿಂಧು (45), ವೆಂಕಟೇಶ್ ಪ್ರಸಾದ್ (52), ಅನಿತಾ (61), ಆಶಾ ಸುಧಾಕರ (72), ಪದ್ಮನಾಭನ್ ಕೆಪಿಎಸ್ (50) ವಿನಾಯಕ ಎಂದು ಗುರುತಿಸಲಾಗಿದೆ. ಈ ವಿಚಾರವನ್ನು ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿ ದೇವೇಂದ್ರ ಪಟವಾಲ್ ಖಚಿತ ಪಡಿಸಿದ್ದಾರೆ.

ಚಾರಣಿಗರ ಪೈಕಿ ಸೌಮ್ಯಾ, ವಿನಯ, ಶಿವಜ್ಯೋತಿ, ಸುಧಾಕರ್, ಸ್ಮೃತಿ, ಸೀನಾ ಅವರನ್ನು ರಕ್ಷಣೆ ಮಾಡಲಾಗಿದೆ.

13 ಜನರ ಸ್ಥಿತಿ ಗಂಭೀರವಾಗಿದ್ದು ವಾಯು ಪಡೆಯಿಂದ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಚಾರಣವನ್ನು ಮೌಂಟೇನಿಯರಿಂಗ್ ಫೌಂಡೇಶನ್ ಆಯೋಜಿಸಿತ್ತು. ಗಢವಾಲ್ ಜಿಲ್ಲಾಧಿಕಾರಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದು ಭಾರತೀಯ ವಾಯುಪಡೆಯ ನೆರವನ್ನು ಪಡೆಯಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!