ಹೊಸದಿಗಂತ ವರದಿ,ಮೈಸೂರು:
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪರಿಚಿತರ ಮಾತನ್ನು ನಂಬಿದ ಮೈಸೂರಿನ ಇಬ್ಬರು ವ್ಯಕ್ತಿಗಳು ಷೇರು ಮಾರುಕಟ್ಟೆಯಲ್ಲಿ ನಕಲಿ ಕಂಪನಿಗಳಿಗೆ ಹಣ ಹೂಡಿಕೆ ಮಾಡಿ ೯.೩೫ ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಮೈಸೂರಿನ ರಾಜಕುಮಾರ್ ರಸ್ತೆ ನಿವಾಸಿ ಲೋಕೇಶ್ ಎಂಬವರಿಗೆ ಷೇರು ಮಾರುಕಟ್ಟೆ ಬಗ್ಗೆ ವಾಟ್ಸ್ ಆಪ್ ಮೆಸೇಜ್ ಬಂದಿದೆ. ಅದನ್ನು ನಂಬಿ ಅವರು ನಕಲಿ ಕಂಪೆನಿಯ ಸದಸ್ಯರಾಗಿದ್ದಾರೆ. ನಂತರ ಕಂಪೆನಿಯವರು ಷೇರು ಮಾರುಕಟ್ಟೆ ಬಗ್ಗೆ ಅವರಿಗೆ ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ. ಅವರ ಮಾತನ್ನು ನಂಬಿದ ಅವರು ಹಂತ ಹಂತವಾಗಿ ೬.೩೫ ಲಕ್ಷ ರೂ. ಹಣವನ್ನು ಹಾಕಿ ಮೋಸ ಹೋಗಿದ್ದಾರೆ.
ಎರಡನೇ ಪ್ರಕರಣದಲ್ಲಿ ಜನತಾ ನಗರದ ನಿವಾಸಿ ರುದ್ರೇಶ್ ಎಂಬವರಿಗೆ ಅಪರಿಚಿತರು ದೂರವಾಣಿ ಮೂಲಕ ಸಂಪರ್ಕಿಸಿ, ಷೇರು ಮಾರುಕಟ್ಟೆ ಬಗ್ಗೆ ತಿಳಿಸಿದ್ದಾರೆ. ಅವರ ಮಾತನ್ನು ನಂಬಿದ ಅವರು ಹಂತ ಹಂತವಾಗಿ ೩ ಲಕ್ಷ ರೂ. ಗಳನ್ನು ವಿವಿಧ ಖಾತೆಗಳಿಗೆ ಹಾಕಿ ವಂಚನೆಗೆ ಒಳಗಾಗಿದ್ದಾರೆ.
ಈ ಎರಡು ಪ್ರಕರಣಗಳ ಸಂಬoಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.