ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಳು ಸುಲಭ: ಶ್ರೀ ಸತ್ಯಾತ್ಮತೀರ್ಥ ಸ್ವಾಮಿ

ಹೊಸದಿಗಂತ ವರದಿ,ಮೈಸೂರು:

ಗುರುಗಳ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲ ಸಾಧನೆಗಲೂ ಸುಲಭ ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮಿ ಹೇಳಿದರು.

ಮೈಸೂರಿನ ಜೆಪಿ ನಗರದ ವಿಠಲಧಾಮದ ಭವ್ಯ ವೇದಿಕೆಯಲ್ಲಿ ಶ್ರೀ ಸೋಸಲೆ ವ್ಯಾಸರಾಜ ಮಠ ಆಯೋಜನೆ ಮಾಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಶುಕ್ರವಾರದ ವಿದ್ವತ್ ಸಭೆಯಲ್ಲಿ ಆಶೀರ್ವಚನ ನೀಡಿದರು.

ವಿದ್ಯಾರ್ಥಿಗಳು ಶ್ರಮ ವಹಿಸಿ ಅಧ್ಯಯನ ಮಾಡಿರುವುದು ಒಂದೆಡೆಯಾದರೆ ಅವರಲ್ಲಿ ಧೈರ್ಯ, ಸದಾಚಾರ , ಸಂಸ್ಕಾರ, ನೈತಿಕತೆ ಮತ್ತು ಜೀವನ ಕ್ರಮದ ಮಾರ್ಗವನ್ನು ಕಲಿಯುವುದು ಗುರುವಿನ ಅನುಸರಣೆಯಿಂದ ಮಾತ್ರ. ಈ ನಿಟ್ಟಿನಲ್ಲಿ ಇಂದು ಸುಧಾಮಂಗಳ ಮಾಡುತ್ತಿರುವ ವಿದ್ಯಾರ್ಥಿಗಳಾದ ಸೌಮಿತ್ರಿ, ಸುಘೋಷ, ಪ್ರಣವ ಮತ್ತು ಹೊನ್ನಾಳಿ ಆಯಾಚಿತ ಶ್ರೀಶ ಆಚಾರ್ಯರು ಪಂಡಿತರು ಮತ್ತು ವಿದ್ವಾಂಸರು ಮೆಚ್ಚುವಂತಹ ಮುಕ್ತ ಪರೀಕ್ಷೆ ನೀಡಿದ್ದಾರೆ ಅವರಿಗೆ ಉನ್ನತೋನ್ನತ ಪ್ರಗತಿ ಆಗಲಿ ಎಂದು ಹೇಳಿದರು.

ಶ್ರೀ ವ್ಯಾಸ ತೀರ್ಥ ವಿದ್ಯಾ ಪೀಠದ ಗೌರವ ಕಾರ್ಯದರ್ಶಿ ಡಾ ಡಿ.ಪಿ. ಮಧುಸೂದನಾಚಾರ್ಯರು ಮಾತನಾಡಿ, ಪೇಜಾವರ ಶ್ರೀ ವಿಶ್ವೇಶ ತೀರ್ಥರು ನಮ್ಮ ವಿದ್ಯಾಪೀಠಕ್ಕೆ ಪ್ರಪ್ರಥಮವಾಗಿ ಸ್ಫೂರ್ತಿ ಮತ್ತು ಚೈತನ್ಯ ನೀಡಿದವರು ಎಂದು ಸ್ಮರಿಸಿದರು.

ಕಳೆದ ಎಂಟು ವರ್ಷಗಳ ಹಿಂದೆ ಶ್ರೀ ವ್ಯಾಸ ತೀರ್ಥ ವಿದ್ಯಾಪೀಠ ತಿರುಮಕೂಡಲು ಕ್ಷೇತ್ರದಲ್ಲಿ ಆರಂಭವಾದಾಗ ಸ್ವತ: ನನ್ನ ತಾಯಿಯವರೇ ಎಲ್ಲ ಮಕ್ಕಳಿಗೂ ಅಡುಗೆ ಮಾಡಿ ಕೈ ತುತ್ತು ಹಾಕಿ ಬೆಳೆಸಿದರು. ವಿದ್ಯಾರ್ಥಿಗಳ ಸಮಗ್ರ ಕ್ಷೇಮ ಪಾಲನೆಯಲ್ಲಿ ಪ್ರತಿನಿತ್ಯವೂ ನೂರಾರು ಸಮಸ್ಯೆ ಎದುರಾದರು ಅವೆಲ್ಲವೂ ಗುರುಗಳ ಪರಮ ಅನುಗ್ರಹದಿಂದ ನಿವಾರಣೆಯಾಗಿ ಇಂದು ನಾಲ್ವರು ಪಂಡಿತರಾಗುವ ಮಟ್ಟದವರೆಗೆ ಸಂಸ್ಥೆ ಬೆಳೆದಿದೆ. ಇದರ ಹಿಂದೆ ಸೋಸಲ ಶ್ರೀ ವಿದ್ಯಾಶ್ರೀಶ ತೀರ್ಥರ ಪರಿಶ್ರಮ ಅಗಾಧವಾಗಿದೆ ಎಂದರು.

ವಿದ್ಯಾಪೀಠದ ವ್ಯವಸ್ಥಾಪಕ ಟ್ರಸ್ಟಿ ಶೇಷಗಿರಿ ಆಚಾರ್ಯ ಮಾತನಾಡಿ, ಸುಧಾ ಪರೀಕ್ಷೆ ಎಂಬುದು ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ , ವಿದ್ವಾಂಸರೂ ತಮ್ಮನ್ನು ತಾವು ಸರಿಪಡಿಸಿಕೊಳ್ಳಲು, ಜ್ಞಾನದ ಶಾಖೆಯನ್ನು ಉನ್ನತೀಕರಿಸಿಕೊಳ್ಳಲು ಮಹೋನ್ನತವಾದ ವೇದಿಕೆಯಾಗಿದೆ ಎಂದರು.

ಸುಧಾ ಪರೀಕ್ಷೆ ಎದುರಿಸಿ ವಿದ್ವಾಂಸರ ಪ್ರಶಂಸೆಗೆ ಭಾಜನರಾದ ಆಯಾಚಿತ ಶ್ರೀಶ ಮತ್ತು ಸುಘೋಷ ಅವರು ತಮ್ಮ ಅನುಭವಗಳನ್ನು ಹಂಚಿಕೊoಡರು.

ಆಯಾಚಿತ ಶ್ರೀಶ ಮಾತನಾಡಿ, ಬಡತನದ ಬೇಗೆಯಲ್ಲಿ ನಾನು ಇದ್ದರೂ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರೂಸೋಸಲೆ ಶ್ರೀ ಗಳು ನನ್ನನ್ನು ಕೈಹಿಡಿದು ಅನ್ನ , ಆಹಾರವನ್ನು ನೀಡಿ ವಿದ್ಯಾದಾನ ಮಾಡಿದರು. ಕಳೆದ ವರ್ಷ ನನ್ನ ಸಹೋದರಿಯ ವಿವಾಹ ಸಂದರ್ಭದಲ್ಲಿಯೂ ನಮ್ಮ ಬಡತನವನ್ನು ಕಂಡು ಸಂಪೂರ್ಣ ವಿವಾಹದ ಜವಾಬ್ದಾರಿಯನ್ನು ಮಠದಿಂದಲೇ ನಿರ್ವಹಿಸಿದ್ದನ್ನು ಜೀವನದಲ್ಲಿ ಮರೆಯಲಾಗದು ಎಂದರು.

ಪ್ರಣವ ಆಚಾರ್ಯ ಮಾತನಾಡಿ, ನಮ್ಮ ಪರೀಕ್ಷೆ ಮತ್ತು ಯಶಸ್ವಿಗಾಗಿ ಹಗಲು ಇರುಳು ಶ್ರಮಿಸಿದ ಉಪನ್ಯಾಸಕರು ಮತ್ತು ಪಂಡಿತರನ್ನು ಸ್ಮರಿಸಿಕೊಂಡರು. ಹಿರಿಯರ ಅನುಗ್ರಹದಿಂದಲೇ ನಮ್ಮ ಉನ್ನತಿ ಸಾಧ್ಯವಾಗಿದೆ ಎಂದು ಧನ್ಯತೆ ಸಮರ್ಪಿಸಿದರು. ಹಿರಿಯ ವಿದ್ವಾಂಸ ಎ.ವಿ. ನಾಗಸಂಪಿಗೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶ್ರೀ ಮಠ ಆಯೋಜಿಸಿದ್ದ ವಿಶೇಷ ಪ್ರದರ್ಶಿನಿ ಗಮನ ಸೆಳೆಯಿತು.

ರಾಮಾಯಣ, ಮಹಾಭಾರತ ಶ್ರೀಮನ್ ನ್ಯಾಯ ಸುಧಾ, ವ್ಯಾಸತ್ರಗಳು , ವೇದಗಳು ಮತ್ತು ಉಪನಿಷತ್ತಿನ ವರ್ಣ ಚಿತ್ರಗಳು ವೀಕ್ಷಕರ ಗಮನಸೆಳೆದವು. ಸಂಜೆ ವಿವಿಧ ಭಜನಾ ಮಂಡಳಿಗಳು ನಾದಸ್ವರ ವೇದಘೋಷ ದೊಂದಿಗೆ ಶೋಭಾ ಯಾತ್ರೆ ಸಂಪನ್ನಗೊoಡಿತು.

ಶ್ರೀ ವ್ಯಾಸರಾಜರಿಗೆ ಸಾಂಪ್ರದಾಯಿಕವಾಗಿ ದರ್ಬಾರ್ ಸಮರ್ಪಿಸಲಾಯಿತು. ವಿವಿಧ ಪೀಠಾಧೀಶರು ವ್ಯಾಸರಾಜರಿಗೆ ರತ್ನದ ಅಭಿಷೇಕ ಸಮರ್ಪಣೆ ಮಾಡಿದರು.

ಪ್ರಶಸ್ತಿ ಪ್ರದಾನ
ವಿವಿಧ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕೆ.ಎಸ್. ಗುರುರಾಜ, ಎಚ್. ಆರ್. ನಾಗೇಂದ್ರ ಮತ್ತು ಎ.ಆರ್. ರಘುರಾಮ ಅವರಿಗೆ ಶ್ರೀಮಠದ ರಘುನಾಥ ತೀರ್ಥ ಅನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!