ಹೊಸದಿಗಂತ ಡಿಜಿಟಲ್ ಡೆಸ್ಕ್:
ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದ ಬೆನ್ನಲ್ಲೇ, ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಜನವರಿ 09 ರಂದು ಅದ್ಧೂರಿಯಾಗಿ ತೆರೆಗೆ ಬರಬೇಕಿದ್ದ ಈ ಸಿನಿಮಾ, ಸೆನ್ಸಾರ್ ಮಂಡಳಿಯ ತಾಂತ್ರಿಕ ಸಂಕಷ್ಟ ಹಾಗೂ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಅನಿವಾರ್ಯವಾಗಿ ಮುಂದೂಡಲ್ಪಟ್ಟಿದೆ.
ಕೆ.ವಿ.ಎನ್ ಪ್ರೊಡಕ್ಷನ್ಸ್ ಮಾಲೀಕ ವೆಂಕಟ್ ನಾರಾಯಣ್ ಅವರ ಪ್ರಕಾರ, ಡಿಸೆಂಬರ್ 18ರಂದೇ ಸಿನಿಮಾವನ್ನು ಸೆನ್ಸಾರ್‌ಗೆ ಸಲ್ಲಿಸಲಾಗಿತ್ತು. ಆರಂಭದಲ್ಲಿ ‘ಯು/ಎ’ ಪ್ರಮಾಣಪತ್ರ ನೀಡುವುದಾಗಿ ತಿಳಿಸಿದ್ದ ಮಂಡಳಿ, ಕೆಲವು ಬದಲಾವಣೆಗಳನ್ನು ಸೂಚಿಸಿತ್ತು. ಚಿತ್ರತಂಡವು ಅದರಂತೆ ಬದಲಾವಣೆ ಮಾಡಿ ಮತ್ತೆ ಸಲ್ಲಿಸಿದರೂ, ಅನಾಮಧೇಯ ದೂರಿನ ಹಿನ್ನೆಲೆಯಲ್ಲಿ ಸಿನಿಮಾವನ್ನು ರಿವ್ಯೂ ಕಮಿಟಿಗೆ ವರ್ಗಾಯಿಸಲಾಯಿತು.
ಈ ವಿಚಾರವಾಗಿ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೊದಲು ಚಿತ್ರಕ್ಕೆ ಅನುಕೂಲಕರ ಆದೇಶ ಬಂದರೂ, ಕೆಲವೇ ಗಂಟೆಗಳಲ್ಲಿ ಕೋರ್ಟ್ ತನ್ನ ಆದೇಶಕ್ಕೆ ತಡೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಜನವರಿ 27ಕ್ಕೆ ನಿಗದಿಯಾಗಿದ್ದು, ಅಲ್ಲಿಯವರೆಗೆ ಸಿನಿಮಾ ಬಿಡುಗಡೆ ಅನುಮಾನ ಎನ್ನಲಾಗಿದೆ.
ಪ್ರತಿ ವರ್ಷ ಪೊಂಗಲ್ ಅಥವಾ ಸಂಕ್ರಾಂತಿ ಹಬ್ಬಕ್ಕೆ ವಿಜಯ್ ಸಿನಿಮಾ ತೆರೆಗೆ ಬರುವುದು ವಾಡಿಕೆ. ಈ ಬಾರಿ ‘ಜನ ನಾಯಗನ್’ ಬರಬೇಕಿತ್ತು, ಆದರೆ ಅದು ಸಾಧ್ಯವಾಗದ ಕಾರಣ ಅಭಿಮಾನಿಗಳ ಬೇಸರ ನೀಗಿಸಲು ವಿಜಯ್ ಅವರ ಸಾರ್ವಕಾಲಿಕ ಬ್ಲಾಕ್ ಬಸ್ಟರ್ ಸಿನಿಮಾ ‘ಥೇರಿ’ ಅನ್ನು ಮರು-ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
ಮರು-ಬಿಡುಗಡೆ ದಿನಾಂಕ: ಜನವರಿ 15, 2026
ನಿರ್ದೇಶನ: ಅಟ್ಲಿ
2016 ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ್ದ ಈ ಆಕ್ಷನ್ ಎಂಟರ್ಟೈನರ್, ಇದೀಗ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ.

