ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರಿಗೆ ರಾಜಸ್ಥಾನ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ ರೈತರಿಗೆ ನೀಡುವ 6 ಸಾವಿರ ರೂಪಾಯಿಯನ್ನು ರಾಜ್ಯ ಸರ್ಕಾರವು 8 ಸಾವಿರ ರೂ.ಗೆ ಏರಿಕೆ ಮಾಡಿದೆ.
ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯ ಸರ್ಕಾರವೂ 2 ಸಾವಿರ ರೂ. ಸೇರಿಸಿರುವ ಕಾರಣ ರಾಜ್ಯದ ರೈತರು ವರ್ಷಕ್ಕೆ 8 ಸಾವಿರ ರೂ. ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಘೋಷಣೆ ಮಾಡಿದ್ದಾರೆ.
ಅನ್ನದಾತರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯವಾಗಿದ್ದು, ರಾಜ್ಯ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೊತ್ತವನ್ನು 2 ಸಾವಿರ ರೂ. ಹೆಚ್ಚಿಸಿದೆ. ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ. ಬದಲು ಇನ್ನು 8 ಸಾವಿರ ರೂ. ಜಮೆಯಾಗಲಿದೆ ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಭಜನ್‌ಲಾಲ್ ಶರ್ಮಾ ಪೋಸ್ಟ್ ಮಾಡಿದ್ದಾರೆ.
ಕಳೆದ ನವೆಂಬರ್‌ನಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯು ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಿಸಾನ್ ಸಮ್ಮಾನ್ ನಿಧಿಯ ಮೊತ್ತವನ್ನು ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ರಾಜ್ಯ ಸರ್ಕಾರವೀಗ ಕಿಸಾನ್ ಸಮ್ಮಾನ್ ನಿಧಿಯನ್ನು ಹೆಚ್ಚಿಸಿದೆ.
ಜೊತೆಗೆ ರಾಜಸ್ಥಾನದಲ್ಲಿ ಕಳೆದ ಐದು ವರ್ಷದಲ್ಲಿ ನಡೆದ ನೇಮಕಾತಿಗಳ ಕುರಿತು ತನಿಖೆಗೂ ಮುಖ್ಯಮಂತ್ರಿ ಆದೇಶಿಸಿದ್ದಾರೆ. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಕುರಿತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ನೇಮಕಾತಿ ಅಕ್ರಮ, ಭ್ರಷ್ಟಾಚಾರದ ಕುರಿತು ತನಿಖೆಯಾಗಬೇಕು ಎಂದು ಆಗ ಅಸ್ತಿತ್ವದಲ್ಲಿದ್ದ ತಮ್ಮದೇ ಸರ್ಕಾರಕ್ಕೆ ಆಗ್ರಹಿಸಿದ್ದರು.