ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಸಚಿವರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ವಿಐಪಿ ಸಂಸ್ಕೃತಿಯಿಂದ ದೂರವಿರುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಸೂಚನೆ ನೀಡಿದ್ದಾರೆ.
ನಮ್ಮ ಯಾವುದೇ ಚಟುವಟಿಕೆಗಳು ವಿಐಪಿ ಸಂಸ್ಕೃತಿಯನ್ನು ಪ್ರತಿಬಿಂಬಿಸದಂತೆ ನಾವೆಲ್ಲರೂ ಜಾಗರೂಕರಾಗಿರಬೇಕು ಎಂದು ಯೋಗಿ ಆದಿತ್ಯನಾಥ್ ಅವರು ತಮ್ಮ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಹೇಳಿರುವುದಾಗಿ ಯುಪಿ ಸರ್ಕಾರದ ಹೇಳಿಕೆ ತಿಳಿಸಿದೆ.
ಸಂವಾದ, ಸಮನ್ವಯ ಹಾಗೂ ಸಂವೇದನಾಶೀಲ ಎಂಬ ಸರ್ಕಾರದ ಮೂರು ಮಂತ್ರಗಳನ್ನು ನೀಡಬೇಕು. ಸರ್ಕಾರ ಇರುವುದು ಜನರಿಗಾಗಿ ಮತ್ತು ಅವರ ಹಿತಾಸಕ್ತಿಗಾಗಿ . ಅಂತಹ ಸಂದರ್ಭದಲ್ಲಿ ನಾವು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗಳು, ನಿರೀಕ್ಷೆಗಳು ಮತ್ತು ಅಗತ್ಯಗಳನ್ನು ಪರಿಹರಿಸಬೇಕು ಎಂದು ಸಚಿವರಿಗೆ ತಿಳಿಸಿದರು.
ಸ್ಥಳೀಯ ಜನಪ್ರತಿನಿಧಿಗಳು ಮತ್ತು ಆಡಳಿತದೊಂದಿಗೆ ಸಮನ್ವಯ ಸಾಧಿಸುವ ಮೂಲಕ ಜನರನ್ನು ಭೇಟಿ ಮಾಡಿ, ಅವರೊಂದಿಗೆ ಸಂವೇದನಾಶೀಲತೆಯಿಂದ ಸಂವಹನ ನಡೆಸಿ ಅವರ ಸಮಸ್ಯೆಗಳನ್ನು ಪರಿಹರಿಸಿ. ಈ ವೇಳೆ ಮಂತ್ರಿಗಳು ಅಥವಾ ಇತರ ಸಾರ್ವಜನಿಕ ಪ್ರತಿನಿಧಿಗಳು, ಪ್ರತಿಯೊಬ್ಬರೂ ವಿಐಪಿ ಸಂಸ್ಕೃತಿಯನ್ನು ಮೊದಲು ಕೈ ಬಿಡಬೇಕು ಎಂದು ಸೂಚಿಸಿದರು.
ಈ ವೇಳೆ ಕೇಂದ್ರದಲ್ಲಿ ಮತ್ತೊಮ್ಮೆ ಎನ್ಡಿಎ ಸರ್ಕಾರ ರಚನೆ ಹಾಗೂ ಸತತ ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದಕ್ಕೆ ಯುಪಿ ಮುಖ್ಯಮಂತ್ರಿ ಅಭಿನಂದಿಸಿದರು ಮತ್ತು ಸಂಸದರಾಗಿ ಆಯ್ಕೆಯಾದ ಸಚಿವರನ್ನು ಅಭಿನಂದಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಳೆದ 10 ವರ್ಷಗಳಲ್ಲಿ ಕೈಗೊಂಡ ಸಾಧನೆಗಳಿಗೆ ವ್ಯಾಪಕ ಪ್ರಚಾರ ನೀಡುವಂತೆಯೂ ಸಚಿವರಿಗೆ ಹೇಳಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯ ಭಾಗವಹಿಸಿ ಹೆಚ್ಚಿನ ಪ್ರಚಾರ ನಡೆಸಬೇಕು. ಡಬಲ್ ಎಂಜಿನ್ ಸರ್ಕಾರದ ನೀತಿಗಳು, ನಿರ್ಧಾರಗಳು ಮತ್ತು ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸಚಿವರುಗಳನ್ನು ಕೋರಿದರು.