ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಷಯ ಎಲ್ಲೆಲ್ಲೂ ಕೇಳಿಬರುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಒಂದೊಂದೇ ಹೊಸ ವಿಷಯಗಳು ಹೊರಗೆ ಬರುತ್ತಿವೆ.
ಜೂನ್ 7 ರಂದು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ ಬಳಿಕ ಬೆಂಗಳೂರಿನ ಆರ್ಆರ್ ನಗರದಲ್ಲಿರುವ ಶೆಡ್ ಒಂದರಲ್ಲಿ ಕೂಡಿಟ್ಟು ಹಲ್ಲೆ ಮಾಡಿ ಕ್ರೂರವಾಗಿ ಸಾಯಿಸಲಾಗಿದೆ ಎಂಬ ಆರೋಪ ಇದೆ. ಈ ಗ್ಯಾಂಗ್ ಕೊಲೆ ಮಾಡಿದ್ದು ಹೇಗೆ ಎನ್ನುವ ವಿಷಯ ಹೊರಬಂದಿದೆ. ಆದರೆ ಹೇಗೆ ಶವ ವಿಲೇವಾರಿ ಮಾಡಿದ್ದಾರೆ ಎನ್ನುವ ವಿಷಯ ಹೊರಬಂದಿಲ್ಲ. ಈ ರೀತಿ ಮಾಡುವಾಗಲೇ ಗ್ಯಾಂಗ್ ಸಿಕ್ಕಿಹಾಕಿಕೊಂಡಿದೆ.
ಗ್ಯಾಂಗ್ ಆರ್.ಆರ್.ನಗರದ ಪಟ್ಟಣಗೆರೆ ಶೆಡ್ನಿಂದ ಮೃತದೇಹವನ್ನು ಸುಮ್ಮನಹಳ್ಳಿ ಬಳಿಯ ಸತ್ವಾ ಅಪಾರ್ಟ್ಮೆಂಟ್ ಮುಂಭಾಗದ ರಾಜಕಾಲುವೆಗೆ ಎಸೆದಿದ್ದರು. ರಾಜಕಾಲುವೆಗೆ ಬಿಸಾಕಿದ್ರೆ ಮೃತದೇಹ ನೀರಿನಲ್ಲಿ ಕೊಚ್ಚಿಹೋಗುತ್ತದೆ ಎಂದುಕೊಂಡು ಎಸೆದಿದ್ದಾರೆ. ನಸುಕಿನ ಜಾವ ಶವವನ್ನ ರಾಜಕಾಲುವೆಗೆ ಬಿಸಾಕಲು ಆರೋಪಿಗಳು ಹೋಗಿದ್ದರು.
ಶವವನ್ನು ಮೇಲೆ ಎತ್ತಿ ಬೀಸಾಡುವ ಆತುರದಲ್ಲಿ ದೇಹ ಸರಿಯಾಗಿ ರಾಜಕಾಲುವೆಗೆ ಬಿದ್ದಿಲ್ಲ. ರಾಜಕಾಲುವೆಯ ದಡದಲ್ಲಿ ರೇಣುಕಾಸ್ವಾಮಿ ಮೃತದೇಹ ಬಿದ್ದಿದೆ. ಕಾಲುವೆ ಒಳಗೆ ಬಿದ್ದಿದೆಯೆಂದು ಭಾವಿಸಿದ್ದ ಆರೋಪಿಗಳು ಅಲ್ಲಿಂದ ಪರಾರಿ ಆಗಿದ್ದರು. ಕೊಳಚೆ ನೀರಿನಿಂದ ತುಂಬಿರುತ್ತಿದ್ದ ಸುಮ್ಮನಹಳ್ಳಿ ರಾಜಕಾಲುವೆಯಲ್ಲಿ ಒಂದೊಮ್ಮೆ ಮೃತದೇಹ ಬಿದ್ದಿದ್ರೆ ನೀರಿನಲ್ಲಿ ಹರಿದು ಹೋಗುತ್ತಿತ್ತು. ದೇಹದ ಮೇಲಿನ ಗುರುತುಗಳು ಸಿಗುತ್ತಿರಲಿಲ್ಲ. ಆದರೆ ಮೃತದೇಹ ರಾಜಕಾಲುವೆಯ ದಡಕ್ಕೆ ಬಿದ್ದಿದ್ದರಿಂದ ಪ್ಲಾನ್ ಉಲ್ಟಾ ಹೊಡೆದು ಎಲ್ಲರೂ ಸಿಕ್ಕಿಹಾಕಿಕೊಂಡಿದ್ದಾರೆ.