ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು- ಕಾಶ್ಮೀರದ ರಿಯಾಸಿನಲ್ಲಿ ನಡೆದ ಉಗ್ರ ದಾಳಿಯ ವಿರುದ್ಧ ಪಾಕಿಸ್ತಾನದ ಕ್ರಿಕೆಟಿಗ ಹಸನ್ ಅಲಿ ಮತ್ತು ಅವರ ಪತ್ನಿ ಧ್ವನಿ ಎತ್ತಿದ್ದಾರೆ.
ನಾಲ್ಕು ದಿನಗಳ ಹಿಂದೆ ರಿಯಾಸಿಯಲ್ಲಿ ವೈಷ್ಣೋದೇವಿಗೆ ಹೊರಟಿದ್ದ ಯಾತ್ರಾರ್ಥಿಗಳ ಬಸ್ ಮೇಲೆ ಪಾಕ್ ಉಗ್ರರು ದಾಳಿ ನಡೆಸಿ ಮಕ್ಕಳು ಸೇರಿ 10 ಮಂದಿಯನ್ನು ಬಲಿ ಪಡೆದಿದ್ದರು. ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು.
ಇದರ ವಿರುದ್ಧ ಪಾಕಿಸ್ತಾನದ ಕ್ರಿಕೆಟಿಗ ಧ್ವನಿ ಎತ್ತಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ‘ರಿಯಾಸಿ ಭಯೋತ್ಪಾದಕ ದಾಳಿಯ ಮೇಲೆ ಎಲ್ಲರ ಕಣ್ಣುಗಳು ಇವೆ’ ಎಂದು ಪೋಸ್ಟ್ ಹಂಚಿಕೊಂಡಿದ್ದರು.
ಕ್ರಿಕೆಟಿಗನ ಈ ನಡೆಗೆ ಪಾಕಿಸ್ತಾನದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಜೊತೆಗೆ ಹಸನ್ ಅಲಿಗೆ ಜೀವ ಬೆದರಿಕೆಯೂ ಹಾಕಲಾಗಿದೆ. ಕ್ರಿಕೆಟಿಗನನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಭಾರತದಲ್ಲಿ ಅಲಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಉಗ್ರ ದಾಳಿಯ ವಿರುದ್ಧ ಧ್ವನಿ ಎತ್ತಿದ ಹಸನ್ ಅಲಿಗೆ ಧನ್ಯವಾದ. ನಿಮ್ಮ ಪರವಾಗಿ ನಾವಿದ್ದೇವೆ ಎಂದು ಬೆಂಬಲಿಸಲಾಗುತ್ತಿದೆ.
ಸ್ಪಷ್ಟನೆ ನೀಡಿದ ಅಲಿ
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೇಳಿಕೆಯಿಂದ ಟೀಕೆ- ಟಿಪ್ಪಣಿ ವ್ಯಕ್ತವಾದ ಹಿನ್ನೆಲೆ ಸ್ಪಷ್ಟನೆ ನೀಡಿರುವ ಹಸನ್ ಅಲಿ, ‘ಭಯೋತ್ಪಾದನೆ/ಹಿಂಸಾಚಾರವು ಯಾವುದೇ ಜಾತಿ ಅಥವಾ ಧರ್ಮಕ್ಕೆ ಮಾರಕ. ಅದಕ್ಕಾಗಿಯೇ ನಾನು ಈ ಹೇಳಿಕೆ ಹಂಚಿಕೊಂಡಿದ್ದೇನೆ. ಎಲ್ಲೆ ಮತ್ತು ಹೇಗೆ ಸಾಧ್ಯವೋ ಅಲ್ಲೆಲ್ಲಾ ಶಾಂತಿಯ ಪರ ಧ್ವನಿ ಎತ್ತುತ್ತೇನೆ. ಗಾಜಾದಲ್ಲಿ ನಡೆಯುತ್ತಿರುವ ದಾಳಿಯನ್ನು ನಾನು ಯಾವಾಗಲೂ ಖಂಡಿಸುತ್ತೇನೆ. ಎಲ್ಲಿಯೇ ಆದರೂ, ಅಮಾಯಕರ ಮೇಲೆ ದಾಳಿ ನಡೆದಾಗ ಅದರ ವಿರುದ್ಧ ನಾನು ನಿಲ್ಲುವೆ. ಪ್ರತಿ ಮಾನವನ ಜೀವವೂ ಮುಖ್ಯ. ಪ್ರಾಣ ಕಳೆದುಕೊಂಡವರಿಗೆ ದೇವರು ಸದ್ಗತಿ ನೀಡಲಿ’ ಎಂದು ಕೋರಿದ್ದಾರೆ.
https://x.com/RealHa55an/status/1800954352795857031
ಹಸನ್ ಅಲಿ ಬಳಿಕ ಅವರ ಪತ್ನಿಯಿಂದಲೂ ರಿಯಾಸಿ ದಾಳಿಯನ್ನು ಟೀಕಿಸಲಾಗಿದೆ.