ಬಂಗಾಳ ರೈಲು ದುರಂತಕ್ಕೆ ಕಾರಣ ಏನು?: ಪ್ರಾಥಮಿಕ ತನಿಖೆ ಕುರಿತು ಅಧಿಕಾರಿಗಳು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತದಲ್ಲಿ 15 ಜನ ಮೃತಪಟ್ಟು 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ರೈಲ್ವೆ ಮಂಡಳಿಯ ಅಧಿಕಾರಿಗಳು ಸಿಗ್ನಲ್‌ನಲ್ಲಿಯ ತಾಂತ್ರಿಕ ದೋಷದಿಂದ ಈ ಅಪಘಾತ ಸಂಭವಿಸಿರಬಹುದು ಎಂಬ ಸಂಗತಿಯನ್ನು ಪ್ರಾಥಮಿಕವಾಗಿ ಕಂಡುಕೊಂಡಿದ್ದಾರೆ.

ಇಂದು ಬೆಳಿಗ್ಗೆ ರಂಗಪಾನಿ ನಿಲ್ದಾಣದಿಂದ ಹೊರಟಿದ್ದ ಕಾಂಚನಜುಂಗಾ ರೈಲು (ಟ್ರೈನ್ ಸಂಖ್ಯೆ 13174) ಸಿಗ್ನಲ್ ದೋಷದಿಂದ ರಾಣಿಪಾತ್ರಾ ಮತ್ತು ಛತ್ತರ್ ಹಾಟ್ ನಿಲ್ದಾಣಗಳ ನಡುವೆ ಬೆಳಿಗ್ಗೆ 5.30 ರಿಂದಲೇ ನಿಲುಗಡೆಯಾಗಿತ್ತು.ಇದೇ ಮಾರ್ಗದಲ್ಲಿ ಗೂಡ್ಸ್ ರೈಲು ಹಿಂದಿನಿಂದ ಬರುತ್ತಿತ್ತು. ಸಿಗ್ನಲ್ ದೋಷಗಳನ್ನು ಕಂಡುಕೊಳ್ಳದೇ ಗೂಡ್ಸ್ ರೈಲು ಕಾಂಚನಜುಂಗಾ ರೈಲಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿ ದೋಷಪೂರಿತ ಸಿಗ್ನಲ್‌ಗಳನ್ನು ದಾಟಲು ಸಂಬಂಧಿಸಿದವರಿಂದ ಚಾಲಕನಿಗೆ ಸೂಚನೆ ಹೋಗಿತ್ತೇ? ಅಥವಾ ಗೂಡ್ಸ್‌ ರೈಲು ಚಾಲಕನೇ ಸಿಗ್ನಲ್ ಮಾನದಂಡಗಳನ್ನು ಉಲ್ಲಂಘಿಸಿದನೇ? ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ದೋಷಪೂರಿತ ಸಿಗ್ನಲ್‌ಗಳನ್ನು ದಾಟಲು ಅನುಮತಿ ಪಡೆದಿದ್ದರೇ ಗೂಡ್ಸ್ ರೈಲು ಚಾಲಕ, ಪ್ರತಿ ಸಿಗ್ನಲ್‌ನಲ್ಲಿ ಕೆಲಹೊತ್ತು ನಿಂತು ಗಂಟೆಗೆ 10 ಕಿ.ಮೀ ವೇಗದಲ್ಲಿ ಮಾತ್ರ ರೈಲು ಓಡಿಸಬೇಕಿತ್ತು. ಆದರೆ, ಎಲ್ಲಿ ತಪ್ಪಾಗಿದೆ ಎಂಬುದನ್ನು ತಿಳಿಯಲು ಇನ್ನೂ ವಿಸ್ತೃತ ತನಿಖೆ ನಡೆಯಬೇಕಿದೆ ಎಂದು ತಿಳಿಸಿದ್ದಾರೆ.

ದುರ್ಘಟನೆ ನಡೆದ ಸ್ಥಳದಲ್ಲಿ ಗೂಡ್ಸ್ ರೈಲು ಚಾಲಕನ ಮೃತದೇಹ ಕಂಡು ಬಂದಿರುವ ರೀತಿಯನ್ನು ಗಮನಿಸಿದರೇ ಆತನೇ ಸಿಗ್ನಲ್ ಮಾನದಂಡಗಳನ್ನು ಉಲ್ಲಂಘಿಸಿರುವುದು ಬಲವಾಗಿ ತೋರುತ್ತಿದೆ ಎಂದೂ ಅಧಿಕಾರಿಗಳು ಶಂಕಿಸಿದ್ದಾರೆ.

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ಅಗರ್ತಲಾದಿಂದ ಸಿಯಾಲ್ಡಹ್‌ಗೆ ತೆರಳುತ್ತಿತ್ತು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರಕ್ಷಣಾ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ರೈಲ್ವೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!