ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಾಯಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ.
ಉತ್ತರಾಖಂಡದ ಹೃಷಿಕೇಶದಲ್ಲಿರುವ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿಯವರು ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾಗಿ ಮುಖ್ಯಮಂತ್ರಿಗಳು ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ತಾಯಿಯ ಯೋಗ ಕ್ಷೇಮ ವಿಚಾರಿಸಿದ್ದಾರೆ. ಅವರು ಸುಮಾರು 20 ನಿಮಿಷಗಳ ಕಾಲ ತಮ್ಮ ತಾಯಿಯ ಜೊತೆ ಸಮಯ ಕಳೆದಿದ್ದಾರೆ.
ಈ ವೇಳೆ ಮುಖ್ಯಮಂತ್ರಿಗಳ ಜೊತೆ ಉತ್ತರಾಖಂಡದ ಆರೋಗ್ಯ ಸಚಿವ ಧನ್ ಸಿಂಗ್ ರಾವತ್ ಮತ್ತು ಹರಿದ್ವಾರ ಸಂಸದ ತ್ರಿವೇಂದ್ರ ಸಿಂಗ್ ಜೊತೆಗಿದ್ದರು . ಹಾಗೇ ಶನಿವಾರದಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕೂಡ ಮುಖ್ಯಮಂತ್ರಿ ಯೋಗಿಯವರ ತಾಯಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಯೋಗಿ ಆದಿತ್ಯನಾಥ್ ಎರಡು ವರ್ಷಗಳ ಬಳಿಕ ತಮ್ಮ ತಾಯಿಯನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿರುವುದಾಗಿದೆ. ಅವರ ತಾಯಿ ಸಾವಿತ್ರಿ ದೇವಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿಂದೆ ಅವರು ಕಣ್ಣಿನ ಸೋಂಕಿಗೂ ಕೂಡ ಒಳಗಾಗಿದ್ದರು ಎಂಬುದಾಗಿ ತಿಳಿದುಬಂದಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೂಲತಃ ಉತ್ತರಾಖಂಡದವರಾಗಿದ್ದು, ಅವರ ಕುಟುಂಬದವರು ಪೌರಿ ಗಢವಾಲ್ ನ ಪಚೌರ್ ಗ್ರಾಮದಲ್ಲಿ ನೆಲೆಸಿದ್ದಾರೆ. ಮುಖ್ಯಮಂತ್ರಿಗಳು ಈ ಹಿಂದೆ 2022ರಲ್ಲಿ ತಮ್ಮ ಕುಟುಂಬದವರಿರುವ ಗ್ರಾಮಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದಿದ್ದರು.