ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ನ್ಯೂ ಜಲಪಾಇಗುಡಿ ನಿಲ್ದಾಣದಿಂದ 10 ಕಿ.ಮೀ ದೂರವಿರುವ ರಂಗಪಾನಿಯಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದ್ದು, ರೈಲಿನ ಹಿಂದಿನ ನಾಲ್ಕು ಬೋಗಿಗಳು ಸಂಪೂರ್ಣ ಹಾನಿಯಾಗೊಳಗಾಗಿದ್ದವು.
ಇದೀಗ ಘಟನೆ ನಡೆದು ಒಂದು ದಿನದ ಬಳಿಕ ಎರಡೂ ಮಾರ್ಗಗಳಲ್ಲಿ ರೈಲು ಸಂಚಾರ ಪುನರಾರಂಭವಾಗಿದೆ.
ವಿದ್ಯುತ್ ಎಂಜಿನ್‌ಗಳನ್ನು ಹೊಂದಿರುವ ರೈಲುಗಳು ಮಂಗಳವಾರ ಮಧ್ಯಾಹ್ನದಿಂದ ಈ ಮಾರ್ಗದಲ್ಲಿ ಸಂಚರಿಸಲು ಪ್ರಾರಂಭಿಸಿವೆ ಎಂದು ಕತಿಹಾರ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಸ್. ಕುಮಾರ್ ತಿಳಿಸಿದ್ದಾರೆ. ಹಳಿಗಳು ಮತ್ತು ಇತರ ಘಟಕಗಳ ದುರಸ್ತಿ ಬಳಿಕ ವೇಗದ ನಿರ್ಬಂಧಗಳೊಂದಿಗೆ ರೈಲುಗಳು ಸಂಚರಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆ ಸಂಭವಿಸಿದ್ದ ಅಪಘಾತದಿಂದ ಹಳಿಗಳು ಮತ್ತು ವಿದ್ಯುತ್ ಟ್ರಾಕ್ಷನ್ ಕಂಬಗಳಿಗೆ ವ್ಯಾಪಕ ಹಾನಿಯಾಗಿದೆ. ಸೋಮವಾರ ರಾತ್ರಿ ಎಲೆಕ್ಟ್ರಿಕ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಬಳಸಿ ದುರಸ್ತಿ ಕಾರ್ಯ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.