ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ 12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ ಉದ್ಘಾಟನೆಗೆ ದಿನ ಮೊದಲು ಕುಸಿದು ಬಿದ್ದ ಘಟನೆ ನಡೆದಿದೆ.
ಸೇತುವೆ ನಿಧಾನವಾಗಿ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸೇತುವೆಯನ್ನು ಅರಾರಿಯಾದಲ್ಲಿ ಬಕ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗಿತ್ತು. ಸೇತುವೆ ಸಂಪೂರ್ಣವಾಗಿ ನೀರಿಗೆ ಬಿದ್ದು ಕ್ಷಣದಲ್ಲಿ ಕೊಚ್ಚಿ ಹೋಗಿದೆ.
ಅರರಿಯಾ ಜಿಲ್ಲೆಯ ಕುರ್ಸಕಾಂತ್ ಹಾಗೂ ಸಿಕ್ತಿ ಎಂಬ ಎರಡು ಪ್ರದೇಶಗಳ ಮಧ್ಯೆ ಸಂಪರ್ಕ ಕಲ್ಪಿಸುವುದಕ್ಕಾಗಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಘಟನೆಯಲ್ಲಿ ಯಾರಿಗೂ ಹಾನಿಯಾದ ಬಗ್ಗೆ ವರದಿ ಆಗಿಲ್ಲ.
ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯದಿಂದಾಗಿ ಸೇತುವೆ ಕುಸಿದಿದೆ ಎಂದು ಸಿಕ್ತಿ ಶಾಸಕ ವಿಜಯ್‌ಕುಮಾರ್ ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆಗಳು ಉದ್ಘಾಟನೆಗೂ ಮೊದಲೇ ಕುಸಿಯುವುದು ಹೊಸದೇನಲ್ಲ, ಈ ಹಿಂದೆ ಭಗಲ್ಪುರದ ಸೇತುವೆಯೂ ಹೀಗೆ ಉದ್ಘಾಟನೆ ಮಾಡುವ ಮೊದಲೇ ಕುಸಿದು ಬಿದ್ದಿತ್ತು.