ಹೊಸದಿಗಂತ ವರದಿ, ಹೊನ್ನಾವರ:
ತಾಲೂಕಿನ ಗ್ರಾಮೀಣ ಭಾಗದಲ್ಲಿ ತೋಟಕ್ಕೆ ಕಾಡು ಹಂದಿಗಳ ಹಾವಳಿ ವಿಪರೀತವಾಗಿದ್ದು ರೈತರು ತಮ್ಮ ತೋಟ ರಕ್ಷಿಸುವುದೇ ಹರಸಹಾಸವಾಗಿದೆ. ಸಾಲ್ಕೋಡ್ ಗ್ರಾಮದ ಗೋಡಾಮಕ್ಕಿ ನಿವಾಸಿ ವಿಶ್ವನಾಥ ಭಟ್ ಇವರ ತೋಟದಲ್ಲಿನ ಇಂಟರ್ ಸಿ ತಳಿಯ 50ಕ್ಕೂ ಅಧಿಕ ಅಡಿಕೆ ಸಸಿಗಳು ಹಂದಿ ಕಾಟದಿಂದ ಹಾನಿಯಾಗಿದೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ನಿರಂತರವಾಗಿದ್ದು, ಕಾಡುಹಂದಿ ಹಾಗೂ ಮಂಗನ ಕಾಟದಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಹರಸಹಸ ಪಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಪ್ರತಿನಿತ್ಯ ರಾತ್ರಿ ಸಮಯದಲ್ಲಿ ತೋಟಕ್ಕೆ ಆಗಮಿಸುವ ಕಾಡುಹಂದಿ ರೈತರು ಬೆಳೆಸಿದ ಅಡಿಕೆ, ತೆಂಗು, ಬಾಳೆ ಗಿಡಗಳನ್ನು ಮುರಿದು ಹಾಕುದರಿಂದ ಹಾನಿ ಅನುಭವಿಸುವಂತಾಗಿದೆ. ಇಂಟರ್ ಸಿ ತಳಿಯ ಅಡಿಕೆ ಸಸಿಗಳನ್ನು ಹಣ ನೀಡಿ ಬೇರೆಡೆಯಿಂದ ತಂದು ನಾಲ್ಕು ವರ್ಷದಿಂದ ಗೊಬ್ಬರ ನೀರು ಹಾಕಿ ಬೆಳೆಸಿದ ಅಡಿಕೆ ತಳಿಗಳು ಹಂದಿ ಕಾಟದಿಂದ ಹಾನಿಯಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ವಿಶ್ವನಾಥ ಭಟ್ಟ್ ಪತ್ರಿಕೆಗೆ ಮಾಹಿತಿ ನೀಡಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡು ರೈತರು ಬೆಳೆಗೆ ಆದ ಹಾನಿಗೆ ಪರಿಹಾರ ಒದಗಿಸಿಸಲು ಕ್ರಮಕೈಗೊಳ್ಳಬೇಕಾಗಿದೆ.