Special Story | ಅಗ್ನಿಶಮನಕ್ಕೆ ರೋಬೋಟ್: ರಸ್ತೆಗಿಳಿಯಲು ಸಜ್ಜಾಗ್ತಿದ್ದಾನೆ ರಾಜ್ಯದಲ್ಲಿ ಕೆಂಪು ದೈತ್ಯ!

ಹೊಸದಿಗಂತ ವರದಿ, ಬೆಂಗಳೂರು:

ನಂದಿನಿ ಎನ್.

ಗೃಹ ರಕ್ಷಕ ದಳ, ಪೌರರಕ್ಷಣೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಇದೀಗ ಹೈಟೆಕ್ ತಂತ್ರಜ್ಞಾನದ ಮೊರೆಹೋಗಿದ್ದು, ಕರ್ನಾಟಕದಲ್ಲಿ ಪ್ರಥಮ ಬಾರಿಗೆ ರೋಬೋಟ್ ಅಗ್ನಿಶಾಮಕ ವಾಹನವನ್ನು ಶೀಘ್ರದಲ್ಲಿ ಪರಿಚಯಿಸಲು ಮುಂದಾಗಿದೆ. ಈ ಮೂಲಕ ಭಾರೀ ಅಗ್ನಿ ಅವಘಡ ಸಂಭವಿಸಿದಾಗ ಕಟ್ಟಡಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಮತ್ತು ಬೆಂಕಿ ನಂದಿಸಲು ಸಹಾಯಕವಾಗಿದೆ.

ಹೌದು. ಸದ್ಯ ಬಳಸುತ್ತಿರುವ ಅಗ್ನಿಶಾಮಕ ವಾಹನಗಳು, ಕಂಟ್ರೋಲ್ ರೂಮ್ ಮತ್ತು ಇತರೆ ಉಪಕರಣಗಳ ಹೊರತಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಭಾರಿ ಅಗ್ನಿ ಅವಘಡಗಳ ಸಮಯದಲ್ಲಿ ಈ ರೋಬೋಟ್ ಅಗ್ನಿಶಾಮಕ ವಾಹನ ಹೆಚ್ಚಾಗಿ ಬಳಕೆಯಾಗಲಿದೆ. ಈಗಾಗಲೇ ಹೊಸದಿಲ್ಲಿ, ಮುಂಬೈ ಮತ್ತು ಹರಿಯಾಣದಲ್ಲಿ ಅಗ್ನಿಶಾಮಕ ರೋಬೋಟ್ ವಾಹನಗಳು ಚಾಲ್ತಿಯಲ್ಲಿದ್ದು, ಸದ್ಯ ಗುಣಮಟ್ಟದ ಒಂದು ರೋಬೋಟ್ ಅಗ್ನಿಶಾಮಕ ವಾಹನವನ್ನು ತರಲಾಗುತ್ತಿದೆ. ಅಲ್ಲದೇ, ಕಿರಿದಾದ ರಸ್ತೆ, ಗೋದಾಮು. ಬೇಸ್‌ಮೆಂಟ್, ಮಹಡಿ, ಅರಣ್ಯ ಸೇರಿ ಯಾವುದೇ ಸ್ಥಳದಲ್ಲೂ ಕಾರ್ಯನಿರ್ವಹಿಸುವ ಪರಿಣಿತಿ ಹೊಂದಿದೆ. ಹೊಸದಿಲ್ಲಿ, ಮುಂಬೈ ಮತ್ತು ಹರಿಯಾಣದಲ್ಲಿ ಈಗಾಗಲೇ ಬಳಸುತ್ತಿರುವ ರೋಬೋಟಿಕ್ ವಾಹನದ ಸಾಧಕ ಭಾಧಕಗಳನ್ನು ಗಮನಿಸಿ, ಟೆಂಡ‌ರ್ ಪ್ರಕ್ರಿಯೆಯ ಮೂಲಕ ಸರ್ಕಾರದಿಂದ ಅನುಮತಿ ಪಡೆದು ರೋಬೋಟ್ ಖರೀದಿಸಲು ಇಲಾಖೆ ಮುಂದಾಗಿದ್ದು, ಅಗ್ನಿಶಾಮಕ ದಳಕ್ಕೂ ಈ ಬಗ್ಗೆ ಸೂಚನೆ ರವಾನೆಯಾಗಿದೆ ಎಂದು ಹೊಸದಿಗಂತ ಪತ್ರಿಕೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಅವರು ಮಾಹಿತಿ ನೀಡಿದರು.

ವ್ಯಕ್ತಿಯನ್ನುಪಾರು ಮಾಡುವ ಮೊದಲ ಯಂತ್ರ: ಕೆಲವು ಬೆಂಕಿ ಅವಘಡಗಳಲ್ಲಿ ಬೆಂಕಿ ಹತ್ತಿದ ಕೂಡಲೇ ಸ್ಫೋಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದು ಬರಬರುತ್ತಾ 50 ಅಡಿ ಎತ್ತರಕ್ಕೆ ತಲುಪುವ ಸಂದರ್ಭಗಳಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳೂ ಹೆಚ್ಚು ಅಪಾಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ವೇಳೆ ಅಗ್ನಿಶಾಮಕ ರೋಬೋಟಿಕ್ ಯಂತ್ರದ ಸಹಾಯದಿಂದ ಅಗ್ನಿಯನ್ನು ಕೂಡಲೇ ಶಮನಗೊಳಿಸಬಹುದಾಗಿದೆ. ಹೊತ್ತಿರುವ ಅಗ್ನಿಯ ತೀವ್ರತೆಯನ್ನು ಕಡಿಮೆ ಮಾಡುವ ಸಲುವಾಗಿ ಹೌಸಿಂಗ್, ವಾಟರ್ ಜೆಟ್, ಚಿಕ್ಕ ಗಾಲಿಗಳು, ಚೈನ್ ವ್ಯವಸ್ಥೆ ಇರಲಿದೆ. ಈ ಯಂತ್ರ ಲೋಹದ್ದಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಒಳಗೆ ನುಗ್ಗಿ ಅಲ್ಲಿನ ವಸ್ತುಗಳನ್ನು ಮತ್ತು ವ್ಯಕ್ತಿಗಳನ್ನು ರಕ್ಷಿಸುವ ಮೊದಲು ಈ ಯಂತ್ರವನ್ನು ಕಳುಹಿಸಲಾಗುತ್ತದೆ. ಅದರಲ್ಲಿ ಎಲೆಕ್ಟ್ರಾನಿಕ್ ಕಣ್ಣಿರಲಿದ್ದು ಅಲ್ಲಿನ ಸ್ಥಿಥಿಗತಿಗಳ ಚಿತ್ರಣವನ್ನು ಕಂಟ್ರೋಲ್ ಯೂನಿಟ್‌ಗೆ ರವಾನಿಸಲಿದೆ. ಕೆಂಕಲ್ ಗೋದಾಮುಗಳು, ಪಟಾಕಿ ಶೇಖರಿಸಿದ ಸ್ಥಳಗಳು ಸೇರಿದಂತೆ ಹಲವು ವಾಹನಗಳಿರುವ ಸ್ಥಳಗಳಲ್ಲಿ ಏಕಾಏಕಿ ಅಗ್ನಿ ಅವಘಡ ಸಂಭವಿಸಿದ ವೇಳೆ ಹೆಚ್ಚಿನ ಜೀವ ಹಾನಿ ತಪ್ಪಿಸಲು ಮತ್ತು ಸಿಬ್ಬಂದಿಗಳು ಇನ್ನಷ್ಟು ಸುರಕ್ಷಿತವಾಗಿ ಕಾರ್ಯನಿರ್ವಹಿಸಲು, ಇದು ಹೆಚ್ಚು ಸಹಕಾರಿಯಾಗಲಿದೆ. ಯಾವುದೇ ರೀತಿಯ ಪೈಪ್‌ನ್ನು ಕೂಡ ಈ ಯಂತ್ರದಲ್ಲಿ ನೀರು ಸಿಂಪಡಿಸಲು ಬಳಸಬಹುದಾಗಿದ್ದು, ಹೊರಗಿನಿಂದ 30 ರಿಂದ 40 ಅಡಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.

ರೋಬೋಟ್‌ನಿಂದ 100 ಅಡಿ ನೀರು ಸಿಂಪಡಿಕೆ

ನೀರನ್ನು 100 ರಿಂದ 150 ಅಡಿ ದೂರದಿಂದ ಬೆಂಕಿಯ ಜ್ವಾಲೆಯನ್ನು ಹೊರಗಿನಿಂದ ಅಗ್ನಿ ಶಾಮಕ ರೋಬೋಟ್ ನಿಯಂತ್ರಿಸಬಹುದಾಗಿದೆ. ಅದರ ಮಾರ್ಗವನ್ನು ಮತ್ತು ಜೆಟ್ ವೇಗ ಮತ್ತು ಅದರ ದಿಕ್ಕನ್ನು ಸಹ ಮಾರ್ಗ ದರ್ಶಿಸಬಹುದಾಗಿದೆ. ಜೆಟ್‌ನಲ್ಲಿನ ನೀರನ್ನು ಆ ರೋಬೋಟ್‌ನಿಂದ ಗರಿಷ್ಠ 100 ಅಡಿ ಸಿಂಪಡಿಸಬಹುದಾಗಿದ್ದು, ಜೆಟ್ ಮೂಲಕ ಬೆಂಕಿಯ ವಿಧವನ್ನು ಗಮನಿಸಿ ವಿವಿಧ ದ್ರಾವಣ ಮತ್ತು ಫೋಮ್‌ನ್ನು ಸಹ ರವಾನಿಸಬಹುದಾಗಿದೆ.

ರೊಬೋಟಿಕ್ ಯಂತ್ರವನ್ನು ನಿಯಂತ್ರಣಕ್ಕೆ ಸುಲಭವಾಗಿ ತರಲಾಗದ ಅಗ್ನಿ ಅವಘಡಗಳ ಸಮಯದಲ್ಲಿ ಬಳಸಬಹುದಾಗಿದೆ. ಇದರಿಂದ ಅತ್ಯಮೂಲ್ಯ ವಸ್ತುಗಳು ಮತ್ತು ಅವಘಡದಲ್ಲಿ ಸಿಲುಕಿರುವ ಜನರನ್ನು ಇನ್ನಷ್ಟು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಅವಘಡದಿಂದ ಹೊರ ತರಲು ಸಹಾಯವಾಗಲಿದೆ. ಈ ರೋಬೋಟ್‌ನಿಂದ ಅಗ್ನಿ ಶಾಮಕ ದಳ ಸಿಬ್ಬಂದಿ ಸುರಕ್ಷತೆ ಕೂಡ ಹೆಚ್ಚಾಗಲಿದೆ. ಸದ್ಯ ಒಂದು ಯಂತ್ರವನ್ನು ಖರೀದಿಸಿ ಬಳಸಲು ಮುಂದಾಗಿದ್ದೇವೆ ಇನ್ನೊಂದನ್ನು ಸಹ ಅತಿ ಶೀಘ್ರದಲ್ಲೇ ಖರೀದಿಸಲಿದ್ದೇವೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್‌ ಮಹಾನಿರ್ದೇಶಕ ಕಮಲ್ ಪಂತ್ ಮಾಹಿತಿ ನೀಡಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!