ಹೊಸದಿಗಂತ ವರದಿ,ಕಲಬುರಗಿ
ಕೃಷಿ ಇಲಾಖೆಯ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಜಿಲ್ಲೆಯ 6 ಜನ ರೈತರಿಗೆ 2.59 ಕೋಟಿ ರೂ. ಸಹಾಯಧನದ ಕಬ್ಬು ಕಟಾವು ಯಂತ್ರವನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿತರಣೆ ಮಾಡಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲೆಯ ಕಾವೇರಿ ಮುತ್ತಪ್ಪ, ನಿಂಗಮ್ಮ ಲಕ್ಷ್ಮಿಕಾಂತ, ಪ್ರಭು ಆಂಜನೇಯ, ಮಹಮ್ಮದ್ ಅಬ್ರೂರ್ ಅಹ್ಮದ್ ಮನ್ಸೂರ್ ಪಟೇಲ, ವೀರೇಶ ದುಂಡಪ್ಪ ಹಾಗೂ ಶರಣಮ್ಮ ಮಲ್ಲೇಶಪ್ಪ ಅವರಿಗೆ ಕಬ್ಬು ಕಟಾವು ಯಂತ್ರ ವಿತರಿಸಲಾಗಿದೆ.
ಈ ಯೋಜನೆಯಡಿ ಪ್ರತಿ ಘಟಕದ (ಯಂತ್ರದ) ವೆಚ್ಚ 98.50 ಲಕ್ಷ ರೂ.ಗಳಿದ್ದು, ಇದನ್ನು ರೈತರು ಬ್ಯಾಂಕಿನಿಂದ ಸಾಲ ಪಡೆದು ಯಂತ್ರ ಖರೀದಿಸಬೇಕು ತದನಂತರ ಕೃಷಿ ಇಲಾಖೆ ಸಾಮಾನ್ಯ ವರ್ಗದವರಿಗೆ ಗರಿಷ್ಠ 40 ಲಕ್ಷ ರೂ. ಮಿತಿಗೊಳಪಟ್ಟು ಶೇ.50 ಸಹಾಯಧನ ಮತ್ತು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರಿಗೆ ಗರಿಷ್ಠ 50 ಲಕ್ಷ ರೂ. ಮಿತಿಗೊಳಪಟ್ಟು ಶೇ.70ರಷ್ಟು ಸಹಾಯಧನವನ್ನು ಬ್ಯಾಕ್ ಎಂಡ್ ಸಬ್ಸಿಡಿ ನೀಡಲಾಗುತ್ತದೆ.
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ, ಶಾಸಕ ಎಂ.ವೈ. ಪಾಟೀಲ, ವಿಧಾನ ಪರಿಷತ್ ಶಾಸಕರುಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರಸಿಂಗ್ ಮೀನಾ, ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್ ಇದ್ದರು.