ಅಟಲ್‌ ಸೇತುವೆಯಲ್ಲಿ ಬಿರುಕು ಎಂದ ಕಾಂಗ್ರೆಸ್ ನಾಯಕ: ಬಿಜೆಪಿ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದ ಅತೀ ಉದ್ದದ ಸಮುದ್ರ ಸೇತುವೆ ಅಟಲ್‌ ಸೇತುಯಲ್ಲಿ (MTHL) ಬಿರುಕು ಕಾಣಿಸಿಕೊಂಡಿದ್ದು, ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಮಹಾರಾಷ್ಟ್ರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನಾನಾ ಪಟೋಲೆ , ರಸ್ತೆ ಮೇಲೆ ಸಂಚರಿಸಿ, ಬಿರುಕು ಬಿಟ್ಟ ಜಾಗವನ್ನು ತೋರಿಸಿ ರಸ್ತೆ ಸುರಕ್ಷತೆಯ ಬಗ್ಗೆ ಪರಿಶೀಲಿಸಿದ್ದಾರೆ. ಜೊತೆಗೆ ಅದರ ಫೋಟೋಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಬಳಿಕ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.

ʻಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ʼನಲ್ಲಿ ಅರ್ಧ ಕಿಮೀ ನಷ್ಟು ರಸ್ತೆ ಬಿರುಕು ಬಿಟ್ಟಿದೆ. ನಾನು ಬರೀ ಆರೋಪ ಮಾಡುವ ಬದಲು ನಿಜವಾಗಿಯೂ ಏನಾಗಿದೆ ಎಂಬುದನ್ನು ಜನರಿಗೆ ತೋರಿಸಲು ಬಂದಿದ್ದೇನೆ. ಸರ್ಕಾರವು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತದೆ. ಆದರೆ, ಇಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ನೋಡಿ. ಸೇತುವೆ ಮೇಲಿನ ರಸ್ತೆ ಬಿರುಕು ಬಿಟ್ಟಿದೆ ಎಂದು ಪಟೋಲೆ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ ಸರ್ಕಾರವು ಜನರ ದುಡ್ಡನ್ನು ಜೇಬಿಗೆ ಇಳಿಸಿಕೊಂಡು, ಜನರ ಪ್ರಾಣವನ್ನು ಅಪಾಯಕ್ಕೆ ತಳ್ಳುತ್ತಿದೆ. ಇಂತಹ ಭ್ರಷ್ಟ ಸರ್ಕಾರವನ್ನು ಜನ ಕಿತ್ತೆಸೆಯಬೇಕು. ಸೇತುವೆಗೆ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರಿಟ್ಟಿದ್ದಾರೆ. ನಮಗೆ ಅವರ ಬಗ್ಗೆ ಗೌರವ ಇದೆ. ಆದರೆ, ಅವರ ಹೆಸರಿನ ಸೇತುವೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಮೋದಿ ಅವರು ಈ ಕುರಿತು ಗಮನಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ತಿರುಗೇಟು
ಇನ್ನು ನಾನಾ ಪಟೋಲೆ ಅವರ ಆರೋಪಕ್ಕೆ ಆಡಳಿತಾರೂಢ ಬಿಜೆಪಿ ಯೋಜನೆಯ ನೋಡಲ್ ಏಜೆನ್ಸಿಯಾಗಿರುವ ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ಸ್ಪಷ್ಟನೆ ನೀಡಿದೆ. ಬಿರುಕು ಬಿಟ್ಟಿರುವುದು ಅಟಲ್‌ ಸೇತುವೆಯ ಮೇಲೆ ಅಲ್ಲ, ನವಿ ಉಲ್ವೆಯಿಂದ ಬರುವ ಸರ್ವಿಸ್‌ ರಸ್ತೆಯಲ್ಲಿ ಎಂದು ತಿಳಿಸಿದೆ.

ಈ ಬಗ್ಗೆ ಸ್ಪಷನೆ ನೀಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಟಲ್‌ ಸೇತುಗೆ ಯಾವುದೇ ಅಪಾಯವಿಲ್ಲ. ಕಾಂಗ್ರೆಸ್‌ ಆರೋಪ ಸುಳ್ಳು. ಪಟೋಳೆ ಅವರು ಹಂಚಿಕೊಂಡಿರುವ ಚಿತ್ರ ಸರ್ವೀಸ್‌ ರಸ್ತೆಯದ್ದು ಎಂದು ತಿಳಿಸಿದ್ದಾರೆ.
ಇದು ಸರ್ವಿಸ್ ರಸ್ತೆ, ಇದು ಮುಖ್ಯ ಸೇತುವೆಯ ಸಂಪರ್ಕ ಭಾಗವಾಗಿದೆ. ಇವುಗಳಲ್ಲಿ ಸಣ್ಣಪುಟ್ಟ ಬಿರುಕುಗಳಾಗಿದ್ದು, ಅವುಗಳನ್ನು ದುರಸ್ತಿ ಮಾಡಲಾಗುತ್ತಿದೆ. ಇದರಿಂದಾಗಿ ಯಾವುದೇ ಸಂಚಾರ ವ್ಯತ್ಯಯ ಉಂಟಾಗಿಲ್ಲ ಎಂದು ಅಟಲ್‌ ಸೇತು ಯೋಜನೆ ಮುಖ್ಯಸ್ಥ ಕೈಲಾಶ್ ಗಣತ್ರ ತಿಳಿಸಿದ್ದಾರೆ.

ಕಳೆದ 5 ತಿಂಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ಸೇತುವೆಯನ್ನು ಉದ್ಘಾಟಿಸಿದ್ದರು. ನಟಿ ರಶ್ಮಿಕಾ ಮಂದಣ್ಣ ಸಹ ಈ ಸೇತುವೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈ ಸಮುದ್ರ ಸೇತುವೆಯು ದಕ್ಷಿಣ ಮುಂಬೈನಿಂದ ನವಿ ಮುಂಬೈಗೆ (Mumbai To Navi Mumbai) ಸಂಪರ್ಕ ಕಲ್ಪಿಸಲಿದ್ದು, ಎರಡು ಗಂಟೆಗಳ ಪ್ರಯಾಣವನ್ನ 15-20 ನಿಮಿಷಗಳಲ್ಲಿ ತಲುಪಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!