ಹೊಸದಿಗಂತ ಬೆಂಗಳೂರು
ಕ್ರಿಕೆಟ್ ಇತಿಹಾಸದ ಸುವರ್ಣ ಕಾಲವನ್ನು ನೆನಪಿಸುವಂತಹ ‘ವರ್ಲ್ಡ್ ಲೆಜೆಂಡ್ಸ್ ಪ್ರೋ T20 ಲೀಗ್’ ತನ್ನ ಚೊಚ್ಚಲ ಆವೃತ್ತಿಗೆ ಸಜ್ಜಾಗಿದ್ದು, ಈ ಕ್ರೀಡಾ ಸಂಭ್ರಮಕ್ಕೆ ಗೋವಾ ಟೂರಿಸಂ ‘ಪವರ್ಡ್ ಬೈ’ ಪ್ರಾಯೋಜಕತ್ವದ ಬಲ ನೀಡಿದೆ. ಜನವರಿ 26 ರಿಂದ ಗೋವಾದ ‘1919 ಕ್ರಿಕೆಟ್ ಸ್ಟೇಡಿಯಂ’ನಲ್ಲಿ ಈ ಅದ್ದೂರಿ ಟೂರ್ನಿ ಆರಂಭವಾಗಲಿದೆ.
ಈ ಲೀಗ್‌ನಲ್ಲಿ ಒಟ್ಟು ಆರು ತಂಡಗಳಿದ್ದು, ವಿಶ್ವದ 90 ಪ್ರಸಿದ್ಧ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ. ಕ್ರಿಸ್ ಗೇಲ್, ಶೇನ್ ವಾಟ್ಸನ್, ಡೇಲ್ ಸ್ಟೇನ್, ಫಾಫ್ ಡು ಪ್ಲೆಸಿಸ್ ಮತ್ತು ಜಾಕ್ವಿಸ್ ಕಾಲಿಸ್ ಅಂತಹ ಅಂತರರಾಷ್ಟ್ರೀಯ ತಾರೆಗಳ ಜೊತೆಗೆ ಭಾರತದ ಹೆಮ್ಮೆಯ ಆಟಗಾರರಾದ ಶಿಖರ್ ಧವನ್, ದಿನೇಶ್ ಕಾರ್ತಿಕ್ ಹಾಗೂ ಹರ್ಭಜನ್ ಸಿಂಗ್ ಅವರ ಆಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ಕಳೆದ ನಾಲ್ಕು ದಶಕಗಳಿಂದ ಗೋವಾವನ್ನು ಜಾಗತಿಕ ಪ್ರವಾಸಿ ತಾಣವಾಗಿ ಗುರುತಿಸಿರುವ ಗೋವಾ ಟೂರಿಸಂ, ಈಗ ಕ್ರೀಡಾ ಪ್ರವಾಸೋದ್ಯಮಕ್ಕೂ ಕೈಜೋಡಿಸಿದೆ.
“ಈ ಲೀಗ್ ಗೋವಾದ ಪ್ರವಾಸೋದ್ಯಮ ದೃಷ್ಟಿಕೋನಕ್ಕೆ ಪೂರಕವಾಗಿದೆ. ಜಾಗತಿಕ ಕ್ರಿಕೆಟ್ ದಿಗ್ಗಜರ ಆಗಮನದಿಂದ ರಾಜ್ಯದ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ,” ಎಂದು ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಖಾಂಟೆ ಆಶಯ ವ್ಯಕ್ತಪಡಿಸಿದ್ದಾರೆ.
SGSE ಸಂಸ್ಥೆಯ ಸಿಇಒ ಮಹೇಶ್ ಭೂಪತಿ ಮಾತನಾಡಿ, “ಗೋವಾ ಟೂರಿಸಂ ನಮ್ಮೊಂದಿಗೆ ಕೈಜೋಡಿಸಿರುವುದು ಸಂತೋಷದ ವಿಷಯ. ಈ ಸಹಯೋಗವು ಗೋವಾವನ್ನು ಅಂತರರಾಷ್ಟ್ರೀಯ ಕ್ರೀಡಾ ಈವೆಂಟ್‌ಗಳ ಪ್ರಮುಖ ಕೇಂದ್ರವನ್ನಾಗಿ ಮಾಡಲಿದೆ,” ಎಂದು ತಿಳಿಸಿದ್ದಾರೆ.
ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ತಮ್ಮ ನೆಚ್ಚಿನ ಆಟಗಾರರು ಮತ್ತೆ ಬ್ಯಾಟ್ ಮತ್ತು ಬಾಲ್ ಹಿಡಿದು ಮೈದಾನಕ್ಕಿಳಿಯುವುದನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.


