October 10, 2026
Saturday, October 10, 2026
spot_img

ಬಾಕ್ಸ್ ಆಫೀಸ್ ಸಮರ: ‘ಧುರಂಧರ್ 2’ ಎಡವಟ್ಟು, ‘ಉಸ್ತಾದ್ ಭಗತ್ ಸಿಂಗ್’ಗೆ ಶುಕ್ರದೆಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣ್ವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾ ನಾಳೆ ವಿಶ್ವಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಸಿನಿಮಾ ಮೇಲಿನ ಕ್ರೇಜ್ ಹೇಗಿತ್ತೆಂದರೆ, ಇಂದಿನ ಪೇಯ್ಡ್ ಪ್ರೀಮಿಯರ್ ಶೋಗಳ ಟಿಕೆಟ್‌ಗಳು ನಾಲ್ಕೈದು ಪಟ್ಟು ಹೆಚ್ಚಿನ ದರಕ್ಕೆ ಮಾರಾಟವಾಗಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಸುಮಾರು 6 ನಿಮಿಷಗಳ ಕಟ್ ಸೂಚಿಸಿದ ಕಾರಣ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

ಸೆನ್ಸಾರ್ ಸೂಚಿಸಿದ ಬದಲಾವಣೆಗಳನ್ನು ಅಳವಡಿಸಲು ಸಿನಿಮಾ ಟ್ರಿಮ್ಮಿಂಗ್ ಕೆಲಸ ನಡೆಯುತ್ತಿದೆ. ಈ ತಾಂತ್ರಿಕ ಕಾರಣದಿಂದಾಗಿ ಭಾರತದಲ್ಲಿ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ಪೇಯ್ಡ್ ಪ್ರೀಮಿಯರ್ ಶೋಗಳನ್ನು ರದ್ದುಗೊಳಿಸಲಾಗಿದೆ. ಕೇವಲ ಹಿಂದಿ ಆವೃತ್ತಿಯ ಪ್ರದರ್ಶನಕ್ಕೆ ಮಾತ್ರ ಅವಕಾಶ ಸಿಕ್ಕಿದೆ. ಇನ್ನು ಅಮೆರಿಕದ ಪ್ರೇಕ್ಷಕರಿಗಂತೂ ಭಾರಿ ನಿರಾಸೆಯಾಗಿದ್ದು, ಅಲ್ಲಿನ ಬಹುತೇಕ ಪೇಯ್ಡ್ ಪ್ರೀಮಿಯರ್ ಶೋಗಳು ರದ್ದಾಗಿವೆ ಎಂದು ವರದಿಯಾಗಿದೆ.

‘ಧುರಂಧರ್ 2’ ಎದುರಿಸುತ್ತಿರುವ ಈ ಹಿನ್ನಡೆಯು ನೇರವಾಗಿ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ವರದಾನವಾಗಲಿದೆ. ಅಸಲಿಗೆ ಈ ಸಿನಿಮಾ ಮುಂದಿನ ವಾರ ಬಿಡುಗಡೆಯಾಗಬೇಕಿತ್ತು, ಆದರೆ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಬದಲಾದ ಕಾರಣ ಮಾರ್ಚ್ 19ಕ್ಕೇ ತೆರೆಗೆ ಬರಲು ಸಿದ್ಧವಾಗಿದೆ.

ವಿಶೇಷವಾಗಿ ಉತ್ತರ ಅಮೆರಿಕದಲ್ಲಿ ‘ಧುರಂಧರ್ 2’ ನೀಡುತ್ತಿದ್ದ ಭಾರಿ ಪೈಪೋಟಿಯಿಂದಾಗಿ ‘ಉಸ್ತಾದ್ ಭಗತ್ ಸಿಂಗ್’ ಪ್ರೀಮಿಯರ್ ಶೋಗಳಿಗೆ ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಈಗ ರಣ್ವೀರ್ ಸಿನಿಮಾ ರೇಸ್‌ನಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿರುವುದರಿಂದ, ಅಮೆರಿಕ ಮತ್ತು ದಕ್ಷಿಣ ಭಾರತದ ಸಿನಿಪ್ರಿಯರು ಪವನ್ ಕಲ್ಯಾಣ್ ಚಿತ್ರದತ್ತ ಮುಖ ಮಾಡುತ್ತಿದ್ದಾರೆ. ಇದು ಚಿತ್ರದ ಕಲೆಕ್ಷನ್ ಮೇಲೆ ಭಾರಿ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.

Must Read