ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚುವರಿ ಡಿಸಿಎಂ ಸ್ಥಾನ ಸೃಷ್ಟಿ ಪಕ್ಷಕ್ಕೆ ಬಿಟ್ಟ ನಿರ್ಧಾರ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳುವ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಮಾತನಾಡಿದ ಅವರು, ಡಿಸಿಎಂ ಸ್ಥಾನಗಳಿಗೆ ಬೇಡಿಕೆ ಸೃಷ್ಟಿಯಾಗಿದೆ ಎಂದು ನೀವು ಪ್ರತೀ ದಿನ ಸುದ್ದಿ ಪ್ರಕಟಿಸುತ್ತಿದ್ದೀರಿ, ಇದರಿಂದ ಖುಷಿಯಾಗುವವರಿಗೆ ಆಗಲಿ. ಪಕ್ಷ ಯಾರಿಗೆ ಏನು ಉತ್ತರ ಕೊಡಬೇಕೋ ಅದನ್ನು ಖಂಡಿತಾ ಕೊಡುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಗೊಂದಲಕ್ಕೆ ತಳ್ಳಿದರು!
ಚನ್ನಪಟ್ಟಣ ಉಪಚುನಾವಣೆ ಸಂಬಂಧ ಮಾತನಾಡಿದ ಅವರು, ಚೆನ್ನಪಟ್ಟಣದ 85 ಸಾವಿರ ಮಂದಿ ಮತ ಕೊಟ್ಟಿದ್ದಾರೆ. ಅವರನ್ನು ಎಂದಿಗೂ ಬಿಡಲಾಗದು. ಹೆಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ನೋಡುವ ಮೊದಲು ನಾನು ನೋಡಿದ್ದೇನೆ. ನಾನು 1985ರಲ್ಲೇ ವಿಧಾನಸಭಾ ಚುನಾವಣೆಗೆ ನಿಂತೆ. ಅವರು 1995ರ ನಂತರ ರಾಜಕಾರಣಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು ಎಂದು ಹೇಳಿದರು.
ಬಳ್ಳಾರಿ ಗಣಿಗಾರಿಕೆಗೆ ಅನುಮತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರಿಗೆ ಎಷ್ಟು ಜ್ಞಾನ ಇದೆ ಅಥವಾ ಇಲ್ಲ ಎಂಬುದು ನನಗಂತೂ ಗೊತ್ತಿಲ್ಲ ಎಂದರು.
ತಮ್ಮನ ವಿಚಾರವಾಗಿ ಮಾತನಾಡಿದ ಅವರು, ನನ್ನ ತಮ್ಮನಿಗೆ ಚುನಾವಣೆಯಲ್ಲಿ ಆಸಕ್ತಿ ಇಲ್ಲ. ಜನ ವಿಶ್ರಾಂತಿ ನೀಡಲು ಹೇಳಿದ್ದಾರೆ. ಆದರೆ, ಪಕ್ಷದ ಕೆಲಸ ಮಾಡಬೇಕೆಂಬ ಆಸೆ ಇದೆ ಎಂದಷ್ಟೇ ಪ್ರತಿಕ್ರಿಯಿಸಿದರು.