ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ಮೊದಲ ಅಧಿವೇಶನದ ಮೂರನೇ ದಿನವಾದ ಇಂದು ಸ್ಪೀಕರ್ ಸ್ಥಾನಕ್ಕೆ ನಡೆದ ಚುನಾವಣೆಯಯಲ್ಲಿ ಓಂ ಬಿರ್ಲಾ ಅವರು ಎರಡನೇ ಬಾರಿ ಲೋಕಸಭೆಯ ಸ್ಪೀಕರ್ ಆಗಿ ಚುನಾಯಿತರಾಗಿದ್ದಾರೆ. ಚುನಾಯಿತರಾದ ಬಳಿಕ ಮೊದಲ ಬಾರಿಗೆ ಸಂಸತ್ನಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಸಂದರ್ಭವನ್ನು ಪ್ರಸ್ತಾಪಿಸಿದರು.
ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಓಂ ಬಿರ್ಲಾ, ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಜಾರಿಗೊಳಿಸಲಾದ ತುರ್ತು ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿದರು. ಆ ಸಂದರ್ಭದಲ್ಲಿ ಜನರಿಗಾದ ಕಷ್ಟ ಕಾರ್ಪಣ್ಯಗಳ ಬಗ್ಗೆ ಮಾತನಾಡಿದರು. ಅಲ್ಲದೇ ತುರ್ತು ಪರಿಸ್ಥಿತಿಯ 50ನೇ ವರ್ಷಾಚರಣೆ ಹಿನ್ನೆಲೆ ಎರಡು ದಿನ ಮೌನಾಚರಣೆಗೆ ಕರೆ ನೀಡಿದರು. ಇದರ ಬೆನ್ನಲ್ಲೇ ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಕಲಾಪನ್ನು ಮುಂದೂಡಲಾಯಿತು. ಸರ್ವಾಧಿಕಾರವನ್ನು ನಿಲ್ಲಿಸಿ.. ದೇಶವನ್ನೇ ಜೈಲಾಗಿ ಪರಿವರ್ತಿಸಿದ್ದಾರೆ ಎಂದು ಘೋಷಣೆ ಕೂಗಿದರು.
ಇದಾದ ಬಳಿಕ ತುರ್ತು ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿದ ಓಂ ಬಿರ್ಲಾ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಗೌರವಾನ್ವಿತ ಸಭಾಧ್ಯಕ್ಷರು ತುರ್ತು ಪರಿಸ್ಥಿತಿಯನ್ನು ಬಲವಾಗಿ ಖಂಡಿಸಿದ್ದು, ಆ ಸಮಯದಲ್ಲಿ ಮಾಡಿದ ಅತಿರೇಕ ವರ್ತನೆ ಮತ್ತು ಪ್ರಜಾಪ್ರಭುತ್ವವನ್ನು ಕತ್ತು ಹಿಸುಕಿದ ರೀತಿಯನ್ನು ಪ್ರಸ್ತಾಪಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಆ ದಿನಗಳಲ್ಲಿ ನಡೆದ ಹಿಂಸಾಚಾರ ಖಂಡಿಸಿ ನಡೆಸಲಾದ ಮೌನಾಚರಣೆಯನ್ನು ನಾವು ಪ್ರಶಂಸಿಸುತ್ತೇವೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.