ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಜೇಜ್ ಪಂದ್ಯಕ್ಕೆ ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಿದೆ.
ಈಗಾಗಲೇ ಇಂದು ಬೆಳಗ್ಗೆ ನಡೆದ ದಕ್ಷಿಣ ಆಫ್ರಿಕಾ ಹಾಗೂ ಆಫ್ಘಾನಿಸ್ತಾನ ನಡುವಿನ ಮೊದಲ ಸೆಮಿಫೈನಲ್ ಪಂದ್ಯವು ಯಾವುದೇ ಮಳೆಯ ಅಡಚಣೆಯಿಲ್ಲದೇ ಯಶಸ್ವಿಯಾಗಿ ಮುಕ್ತಾಯವಾಗಿದೆ. ಹೀಗಾಗಿ ಎರಡನೇ ಸೆಮಿಫೈನಲ್ ಪಂದ್ಯ ಏನಾಗಬಹುದು ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯವು ಸ್ಥಳೀಯ ಕಾಲಮಾನ ಬೆಳಗ್ಗೆ 10.30 ಹಾಗೂ ಭಾರತೀಯ ಕಾಲಮಾನ ಸಂಜೆ 8 ಗಂಟೆಯಿಂದ ಎರಡನೇ ಸಮಿಫೈನಲ್ ಪಂದ್ಯವು ಆರಂಭವಾಗಬೇಕಿದೆ. ಆದರೆ ಈ ಸಮಯದಲ್ಲಿ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಸಿದೆ.
ಪಂದ್ಯ ಆರಂಭಕ್ಕೂ ಮುನ್ನವೇ ಗಯಾನದ ಸ್ಥಳೀಯ ಕಾಲಮಾನ 9 ಗಂಟೆ(ಭಾರತೀಯ ಕಾಲಮಾನ 6.30)ಯಿಂದಲೇ ಮಳೆ ಸುರಿಯಲಿದ್ದು, 11 ಗಂಟೆಯ ವೇಳೆಗೆ (ಭಾರತೀಯ ಕಾಲಮಾನ 8.30ಕ್ಕೆ) ತುಂಬಾ ಜೋರಾಗಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾದರೂ ಸ್ಥಳೀಯ ಕಾಲಮಾನ ಬೆಳಗ್ಗೆ 10.30ರಿಂದ ಈ ಪಂದ್ಯ ಆರಂಭವಾಗುತ್ತಿರುವುದರಿಂದ 7 ಗಂಟೆ 20 ನಿಮಿಷಗಳ ಕಾಲ ಪಂದ್ಯಕ್ಕಾಗಿ ಸಮಯವನ್ನು ಮೀಸಲಿಡಲಾಗಿದೆ. ಹೀಗಿದ್ದೂ ಒಂದು ವೇಳೆ ಮಳೆಯಿಂದ ಪಂದ್ಯ ನಡೆಯದಿದ್ದರೇ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಫೈನಲ್‌ಗೆ ಎಂಟ್ರಿ ಕೊಡಲಿದೆ. ಯಾಕೆಂದರೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್ ಹಂತ ಪ್ರವೇಶಿಸಿದೆ.