ಹೊಸದಿಗಂತ ವರದಿ,ಮಡಿಕೇರಿ:
ಕಳೆದ ಎರಡು ದಿನಗಳಲ್ಲಿ ಸುರಿದ ಭಾರೀ ಮಳೆಗೆ ಮಡಿಕೇರಿ ಹೊರವಲಯದ ಹೆಬ್ಬೆಟ್ಟಗೇರಿಯಲ್ಲಿ ನಿರ್ಮಾಣಗೊಂಡಿರುವ ನೂತನ ಸ್ಕೈವಾಕ್ ಗ್ಲಾಸ್ ಬ್ರಿಡ್ಜ್ ತಪ್ಪಲಲ್ಲಿ ಗುರುವಾರ ಭೂಕುಸಿತ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ ಮಡಿಕೇರಿ ತಹಶೀಲ್ದಾರರು ಗೇಟಿಗೆ ಬೀಗ ಜಡಿದು ಸರ್ಕಾರಿ ಮುದ್ರೆಯನ್ನು ಒತ್ತಿ ಯಾರು ಪ್ರವೇಶಿಸಿದಂತೆ ತಿಳುವಳಿಕೆ ನೊಟೀಸ್ ಅಂಟಿಸಿದ್ದಾರೆ.
ಈ ನಡುವೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಗೊಂಡಿರುವ ಜಾಗವು ಪೈಸಾರಿ ಜಾಗವಾಗಿದ್ದು, ಭೂಕುಸಿತ ಪ್ರದೇಶ, ಗ್ರೀನ್ ಬೆಲ್ಟ್ ಪ್ರದೇಶ ಎಂದು ಸರ್ಕಾರ ಘೋಷಿಸಿರುವುದರಿಂದ ಗ್ಲಾಸ್ ಬ್ರಿಡ್ಜ್ ನಿರ್ಮಾಣವನ್ನು ತಡೆಯುವಂತೆ ಸ್ಥಳೀಯರಾದ ವಿನೋದ್ ಹಾಗೂ ಪವನ್ ಕುಮಾರ್ ಎಂಬವರುಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೆನ್ನಲಾಗಿದೆ.
ಈ ಅರ್ಜಿಗೆ ಸ್ಕೈವಾಕ್ ಬ್ರಿಡ್ಜ್’ನ ಪಾಲುದಾರರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ‘ಕೆವಿಯಟ್’ ಸಲ್ಲಿಸಿದ್ದರು. ಸರ್ಕಾರಿ ಜಾಗ ಎಂದು ದೂರುದಾರರು ನಮೂದಿಸಿದ್ದರಿಂದ ನ್ಯಾಯಾಲಯ ಸರ್ವೆ ನಡೆಸಿ ಕೂಡಲೇ ವರದಿ ನೀಡುವಂತೆ ಸೂಚನೆ ನೀಡಿತ್ತು. ಅದರಂತೆ ಜೂನ್ ಒಂದರಂದು ಸರ್ವೆ ಕಾರ್ಯ ನಡೆಸಲಾಗಿದ್ದು, ಇನ್ನೂ ವರದಿ ನೀಡಿಲ್ಲ ಎನ್ನಲಾಗಿದೆ.
ಮಡಿಕೇರಿ ತಹಶೀಲ್ದಾರ್ ಪರವೀಣ್ ಅವರು ಇದೀಗ ಅಧಿಕಾರ ವಹಿಸಿಕೊಂಡಿದ್ದು, ಈ ಜಾಗಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.