ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಮೇಲ್ಛಾವಣಿ ಕುಸಿದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಎಂಟು ಜನರಿಗೆ ಗಾಯಗಳಾಗಿವೆ.
ಇದರ ಬೆನ್ನಲ್ಲೇ ತನಿಖೆ ನಡೆಸಲು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಶುಕ್ರವಾರ ಸಮಿತಿಯನ್ನು ರಚಿಸಿದೆ.
ದೆಹಲಿಯಲ್ಲಿ ರಾತ್ರಿಯಿಡೀ ಭಾರೀ ಮಳೆ ಮತ್ತು ಗಾಳಿಯಿಂದಾಗಿ, ಟರ್ಮಿನಲ್ 1 (T1) ನ ಹಳೆಯ ನಿರ್ಗಮನ ಫೋರ್ಕೋರ್ಟ್‌ನಲ್ಲಿರುವ ಮೇಲ್ಛಾವಣಿ ಇಂದು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಭಾಗಶಃ ಕುಸಿದಿದೆ. ನಿರಂತರವಾಗಿ ಭಾರೀ ಮಳೆಯಾಗಿರುವುದೇ ಮೇಲ್ಛಾವಣಿ ಕುಸಿತಕ್ಕೆ ಕಾರಣ ಎಂದು DIAL ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ದೆಹಲಿ ಸಫ್ದರ್‌ಜಂಗ್ ಕಳೆದ 24 ಗಂಟೆಗಳಲ್ಲಿ (ಮುಖ್ಯವಾಗಿ ಇಂದು ಮುಂಜಾನೆ) 228.1 ಮಿಮೀ ಭಾರಿ ಮಳೆಯನ್ನು ದಾಖಲಿಸಿದೆ. 1936 ರ ನಂತರ ಜೂನ್‌ನಲ್ಲಿ ದೆಹಲಿಯಲ್ಲಿ ಇದು ಅತಿ ಹೆಚ್ಚು 24 ಗಂಟೆಗಳ ಮಳೆಯಾಗಿದೆ, ಕಳೆದ 30 ವರ್ಷಗಳಲ್ಲಿ ಈ ಪ್ರದೇಶದಲ್ಲಿ ಸರಾಸರಿ ಮಳೆ 75.2 ಮಿಮೀ ಆಗಿತ್ತು ಎಂದು ವಕ್ತಾರರು ಹೇಳಿದ್ದಾರೆ.
ಅಗ್ನಿಶಾಮಕ, ವೈದ್ಯಕೀಯ ತಂಡ ಮತ್ತು ಕಾರ್ಯಾಚರಣೆ ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡದಿಂದ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಯಿತು ಎಂದು ದೆಹಲಿ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಈ ಘಟನೆಯ ಸಮಯದಲ್ಲಿ, ನಾಲ್ಕು ವಾಹನಗಳು ಹಾನಿಗೊಳಗಾಗಿವೆ ಮತ್ತು ಎಂಟು ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದೆಹಲಿ ವಿಮಾನ ನಿಲ್ದಾಣದ ಮೇದಾಂತ ಕೇಂದ್ರದಲ್ಲಿ ತಕ್ಷಣದ ವೈದ್ಯಕೀಯ ನೆರವು ನೀಡಲಾಯಿತು. ಅಗತ್ಯವಿರುವಂತೆ ಹೆಚ್ಚಿನ ವೈದ್ಯಕೀಯ ಮೇಲ್ವಿಚಾರಣೆಗಾಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ದುರದೃಷ್ಟವಶಾತ್, ಘಟನೆಯಲ್ಲಿ ಒಂದು ಸಾವು ವರದಿಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ.