ಡಿಎಂಕೆ ಸರ್ಕಾರದ ವಿರುದ್ಧ ಗುಡುಗಿದ ತಮಿಳು ನಟ ವಿಜಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಸರ್ಕಾರ ಡ್ರಗ್ಸ್ ನಿಯಂತ್ರಣದಲ್ಲಿ ವಿಫಲವಾಗಿದೆ ಎಂದು ನಟ – ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್ ಆರೋಪಿಸಿದ್ದಾರೆ.

ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಟ, ಉತ್ತಮ ಶಿಕ್ಷಣ ಹೊಂದಿರುವ ನಾಯಕರು ರಾಜಕೀಯಕ್ಕೆ ಬರಬೇಕು ಎಂದು ಹೇಳಿದರು.

ವಿಜಯ್ ಈ ಹಿಂದೆ ತಮಿಳುನಾಡಿನ 10 ಮತ್ತು 12ನೇ ತರಗತಿಯ ಟಾಪರ್ಸ್ ಅನ್ನು ಗೌರವಿಸುವುದಾಗಿ ತಿಳಿಸಿದ್ದರು. ಅದರಂತೆ ಇಂದು ಚೆನ್ನೈನಲ್ಲಿ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದಾರೆ. ಚೆನ್ನೈನ ತಿರುವನ್ಮಿಯೂರಿನಲ್ಲಿಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳನ್ನು ಸನ್ಮಾನಿಸಿದ ನಂತರ ಸಮಾರಂಭದಲ್ಲಿ ಮಾತನಾಡಿದ ವಿಜಯ್,’ನಮಗೆ ಉತ್ತಮ ನಾಯಕರು ಬೇಕು. ನಾನಿಲ್ಲಿ ರಾಜಕೀಯವಾಗಿ ಹೇಳುತ್ತಿಲ್ಲ. ನೀವು ಏನು ಮಾಡುತ್ತಿದ್ದೀರೋ, ಅದರಲ್ಲೇ ನಿಮಗೆ ನಾಯಕತ್ವದ ಗುಣ ಇರಬೇಕು, ಅದನ್ನೇ ನಾನಿಲ್ಲಿ ಹೇಳುತ್ತಿದ್ದೇನೆ’ ಎಂದು ತಿಳಿಸಿದರು. ಜೊತೆಗೆ, ಭವಿಷ್ಯದಲ್ಲಿ ರಾಜಕೀಯವೂ ಕೂಡ ಕೆರಿಯರ್​ ಆಗಿ ಆಯ್ಕೆಯಾಗಬೇಕು. ಅದು ನನ್ನ ಆಶಯ. ಉತ್ತಮ ಶಿಕ್ಷಣ ಹೊಂದಿರುವ ನಾಯಕರು ರಾಜಕೀಯಕ್ಕೆ ಬರಬೇಕು ಎಂದು ನೀವು ಯೋಚಿಸುತ್ತೀರಾ? ಎಂದು ನಟ ಪ್ರಶ್ನಿಸಿದರು.

ಸೋಷಿಯಲ್​ ಮೀಡಿಯಾ ಚಾನಲ್​ಗಳು ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ನಮಗೆ ಅನೇಕ ವಿಷಯಗಳನ್ನು ನೀಡುತ್ತವೆ. ಎಲ್ಲವನ್ನೂ ನೋಡಿ. ಆದರೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿಶ್ಲೇಷಿಸಿ.ಆಗ ಮಾತ್ರ ನಮ್ಮ ರಾಷ್ಟ್ರ ಮತ್ತು ಜನರ ನೈಜ ಸಮಸ್ಯೆಗಳನ್ನು ಮತ್ತು ಸಾಮಾಜಿಕ ತೊಡಕುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಲ ರಾಜಕೀಯ ಪಕ್ಷಗಳು ಮತ್ತು ನಕಲಿ ಪ್ರಚಾರಗಳನ್ನು ನಂಬದೇ ಈ ವಿಷಯಗಳನ್ನು ಅರಿತುಕೊಂಡರೆ, ನೀವೆಲ್ಲರೂ ವಿಶಾಲ ಚಿಂತನೆ ಮಾಡಲು ಸಾಧ್ಯವಾಗುತ್ತದೆ. ಆಗ ಮಾತ್ರ ಉತ್ತಮ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕಿಂತ ದೊಡ್ಡ ರಾಜಕೀಯ ಬೇರೊಂದಿಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಇನ್ನೂ ತಮಿಳುನಾಡಿನಲ್ಲಿ ಯುವಕರ ಡ್ರಗ್ಸ್ ಸೇವನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಜಯ್, ‘ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಡ್ರಗ್ಸ್ ಯುವಕರಿಗೆ ಸಾಮಾನ್ಯವಾಗಿಬಿಟ್ಟಿದೆ. ರಾಜಕೀಯ ನಾಯಕನಾಗಿ ಮತ್ತು ಪೋಷಕರಾಗಿ ನನಗೂ ಭಯವಾಗಿದೆ. ಡ್ರಗ್ಸ್ ಅನ್ನು ನಿಯಂತ್ರಿಸುವುದು, ಯುವಕರನ್ನು ಉಳಿಸುವುದು ಸರ್ಕಾರದ ಜವಾಬ್ದಾರಿ. ಪ್ರಸ್ತುತ ಸರ್ಕಾರ ಅದರಲ್ಲಿ ವಿಫಲವಾಗಿದೆ’ ಎಂದು ಆಕ್ರೋಶ ಹೊರ ಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!