ಪರಪ್ಪನ ಅಗ್ರಹಾರಕ್ಕೆ ತೆರಳಿ ನಟ ದರ್ಶನ್‌ ನನ್ನು ಭೇಟಿ ಮಾಡಿದ ರಕ್ಷಿತಾ, ಪ್ರೇಮ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ಅವರು ಶನಿವಾರ ಪರಪ್ಪನ ಅಗ್ರಹಾರಕ್ಕೆ ತೆರಳಿ ನಟ ದರ್ಶನ್‌ ನನ್ನು ಭೇಟಿ ಮಾಡಿದ್ದಾರೆ.

ಜೈಲಿನ ಬಳಿ ಆಗಮಿಸಿದ ನಟಿ ರಕ್ಷಿತಾ ಪ್ರೇಮ್ ದಂಪತಿ, ಕಾರಿನಲ್ಲಿಯೇ ಜೈಲಿನ ಆವರಣಕ್ಕೆ ತೆರಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ನನ್ನು ಭೇಟಿಯಾದ ಬಳಿಕ ರಕ್ಷಿತಾ ಭಾವುಕರಾಗಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ರಕ್ಷಿತಾ, ಕಳೆದ 20 ದಿನಗಳಿಂದ ಆಗುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಇದು ದುರಾದೃಷ್ಟಕರ ಘಟನೆ. ಈ ಪ್ರಕರಣ ಆಗಿರುವುದರ ಬಗ್ಗೆ ಬೇಸರ ಖಂಡಿತಾ ಇದೆ. ನಾನು ಹೇಳೋದು ಇಷ್ಟೇ, ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಎಲ್ಲರಿಗೂ ನ್ಯಾಯ ಸಿಗಲಿ ಎಂದು ಹೇಳಿದರು.

ನಿಮ್ಮ ಬಳಿ ದರ್ಶನ್‌ ಸಹಜವಾಗಿ ಮಾತನಾಡಿದ್ರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಇಂಥ ಸ್ಥಿತಿಯಲ್ಲಿ ಅವರು ಸಹಜವಾಗಿ ನಮ್ಮೊಡನೆ ಹೇಗೆ ಮಾತನಾಡಲು ಸಾಧ್ಯ ಎಂದು ರಕ್ಷಿತಾ ಹೇಳಿದ್ದಾರೆ.
ಪ್ರಕರಣ ನ್ಯಾಯಾಲಯದಲ್ಲಿದೆಯೆಂದು ಮಾತು ಆರಂಭಿಸಿದ ನಟ ಪ್ರೇಮ್, ನಾವು ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ದರ್ಶನ್‌ ನನಗೂ ಸ್ನೇಹಿತರು, ರಕ್ಷಿತಾಗೇ ಕೂಡ ಸ್ನೇಹಿತರು. ಎಲ್ಲದಕ್ಕಿಂತ ಹೆಚ್ಚಾಗಿ ಇಡೀ ಪ್ರಕರಣ ಈಗ ಕಾನೂನಿನ ಅಡಿಯಲ್ಲಿದೆ. ಕೋರ್ಟ್‌ನಲ್ಲಿ ಪ್ರಕರಣವಿದೆ. ಹಾಗಾಗಿ ನಾವೂ ಯಾರೂ ಇದರ ಬಗ್ಗೆ ಮಾತನಾಡೋಕೆ ಹೋಗಬಾರದು. . ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುತ್ತೇನೆ. ಕಾನೂನು ಪ್ರಕಾರ ಏನೆಲ್ಲಾ ಆಗಬೇಕೋ ಅದೆಲ್ಲವೂ ಆಗುತ್ತಿದೆ. ಅದರ ಮುಂದೆ ನಾವು ಯಾರೂ ಕೂಡ ದೊಡ್ಡವರಲ್ಲ. ಇದ್ರ ಮೇಲೆ ಯಾರೂ ಕೂಡ ನನ್ನನ್ನು ಏನೂ ಕೇಳೋಕೆ ಹೋಗಬೇಡಿ. ಇದು ನಿಮಗೆ ನನ್ನ ರಿಕ್ವೆಸ್ಟ್‌ ಅಂತಾದರೂ ಅಂದುಕೊಳ್ಳಿ ಎಂದು ಪ್ರೇಮ್‌ ಹೇಳಿದ್ದಾರೆ. ಅದರೊಂದಿಗೆ ಜೈಲಿನಲ್ಲಿ ದರ್ಶನ್ ಜೊತೆ ನಡೆದ ಮಾತುಕತೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.

ಸಾಮಾನ್ಯವಾಗಿ ಜೈಲಿನಲ್ಲಿ ಒಂದು ವಾರದಲ್ಲಿ ಮೂವರ ಭೇಟಿಗೆ ಮಾತ್ರವೇ ಅವಕಾಶ ಇರುತ್ತದೆ. ದರ್ಶನ್‌ ಭೇಟಿಗೆ ಬಂದ ಇಬ್ಬರಿಗೂ ಅವರ ಭೇಟಿ ಸಾಧ್ಯವಾಗಿದೆ. ಈಗಾಗಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೇಶ್‌, ದರ್ಶನ್‌ರನ್ನ ಭೇಟಿ ಮಾಡಿದ್ದರು. ಕೆಲ ದಿನದ ಹಿಂದೆ ವಿನೋದ್ ಪ್ರಭಾಕರ್ ಕೂಡ ದರ್ಶನ್ ಭೇಟಿ ಮಾಡಿದ್ದರು. ಈ ವಾರದಲ್ಲಿ ಎರಡು ವಿಸಿಟ್ ಆಗಿರುವ ಹಿನ್ನೆಲೆ ಮೂರನೇ ಭೇಟಿಗೆ ಅವಕಾಶ ಸಿಕ್ಕಿದೆ. ಜೈಲು ಅಧಿಕಾರಿಗಳಿಂದ ಒಪ್ಪಿಗೆ ಸಿಕ್ಕಿರುವ ಹಿನ್ನೆಲೆ ರಕ್ಷಿತಾ ಹಾಗೂ ಪ್ರೇಮ್‌ಗೆ ದರ್ಶನ್‌ ಭೇಟಿ ಸಾಧ್ಯವಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಬಳಿ ನಿಧಾನವಾಗಿ ಒಬ್ಬೊಬ್ಬರಾಗಿ ನಟ ನಟಿಯರು ಆಗಮಿಸುತ್ತಿದ್ದಾರೆ. ಕೊಲೆ ಪ್ರಕರಣ ಆಗಿರುವ ಹಿನ್ನೆಲೆ ಕೆಲ ದಿನಗಳ ಕಾಲ ಆಪ್ತರು ಅಂತರ ಕಾಯ್ದುಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!