ಹೊಸದಿಗಂತ ವರದಿ,ಮೈಸೂರು:
ನಾವು ಮುಂಬೈ ಪೊಲೀಸರು ಎಂದು ಹೇಳಿ, ಬೆದರಿಸಿ, ಹೆದರಿಸಿ, ಲಕ್ಷಾಂತರ ರೂ ಹಣ ಕೀಳುವ ಪ್ರಕರಣಗಳು ಅರಮನೆ ನಗರಿ ಮೈಸೂರಿನಲ್ಲಿ ಆಗಾಗ ನಡೆಯುತ್ತಿದ್ದು, ಇದೀಗ ಮತ್ತೊಂದು ಪ್ರಕರಣ ನಡೆದಿದೆ. ನೀವು ಅಕ್ರಮವಾಗಿ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿದ್ದೀರಿ ಎಂದು ಬೆದರಿಕೆಯೊಡ್ಡಿದ ದುಷ್ಕರ್ಮಿಗಳ ತಂಡ ವ್ಯಕ್ತಿಯೊಬ್ಬರಿಂದ ೨೦ ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದಾರೆ.
ಮೈಸೂರಿನ ಶಾರದಾದೇವಿ ನಗರದ ನಿವಾಸಿ ಸಂತೋಷ್ ಎಂಬುವರೇ ಹಣ ಕಳೆದುಕೊಂಡವರು. ಅವರಿಗೆ ವಾಟ್ಸಾಪ್ ಕರೆ ಬಂದಿದೆ. ನಾವು ಮುಂಬೈ ಪೊಲೀಸರು, ನೀವು ಫೆಡೆಕ್ಸ್ ಕೊರಿಯರ್‌ನಿಂದ ನಿಷೇಧಿತ ವಸ್ತುಗಳನ್ನು ಪಾರ್ಸೆಲ್ ಕಳುಹಿಸುತ್ತಿದ್ದೀರಿ ಎಂದು ಹೇಳಿದ್ದಾರೆ.
ನಂತರ ನೀವು ವಿಡಿಯೋ ಮೂಲಕ ಮಾತನಾಡಿ ಎಂದು ಹೇಳಿದ್ದಾರೆ. ನಂತರ ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡುತ್ತಿದ್ದೇವೆ. ಹೀಗಾಗಿ ಖಾತೆಯಲ್ಲಿರುವ ಹಣವನ್ನು ಪೊಲೀಸ್ ಇಲಾಖೆ ಖಾತೆಗೆ ಹಾಕಿ ಎಂದು ಹೇಳಿದ್ದು, ವಿಚಾರಣೆ ನಂತರ ಎರಡು ದಿನಗಳಲ್ಲಿ ಮತ್ತೆ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುತ್ತದೆ ಎಂದು ನಂಬಿಸಿದ್ದಾರೆ.
ವAಚನೆಯ ಬಗ್ಗೆ ಅರಿವಿಲ್ಲದ ಸಂತೋಷ್ ತಮ್ಮ ಖಾತೆಯಲ್ಲಿದ್ದ ೨೦ ಲಕ್ಷ ರೂ. ಹಣವನ್ನು ಅವರು ಹೇಳಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ ಎರಡು ದಿನಗಳು ಕಳೆದರೂ ಹಣ ವಾಪಾಸ್ ಬಾರದ ಕಾರಣ ಮೋಸ ಹೋಗಿರುವುದು ಅರಿವಾಗಿ ಸೈಬರ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.