ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೋದ 2026ರ ಹೊಸ ವರ್ಷದ ಮೊದಲ ಬಾಹ್ಯಾಕಾಶ ಕಾರ್ಯಾಚರಣೆ ವಿಫಲವಾಗಿದೆ. ಆದರೆ ಈ ವಿಫಲದಿಂದ ಎದೆಗುಂದದೆ, ಭವಿಷ್ಯದ ಯೋಜನೆಗಳತ್ತ ಇಸ್ರೋ ಇದೀಗ ತನ್ನ ದೃಷ್ಟಿಯನ್ನು ನೆಟ್ಟಿದೆ.
ಇಸ್ರೋದ ಇಒಎಸ್-ಎನ್1 ಕಣ್ಗಾವಲು ಉಪಗ್ರಹ ಸೇರಿದಂತೆ ದೇಶ-ವಿದೇಶಗಳ ಒಟ್ಟು 16 ವಾಣಿಜ್ಯ ಉಪಗ್ರಹಗಳನ್ನು ಹೊತ್ತು ನಭಕ್ಕೆ ಚಿಮ್ಮಿದ್ದ ಇಸ್ರೋದ ಪಿಎಸ್‌ಎಲ್‌ವಿ-ಸಿ62 ರಾಕೆಟ್, ಬೆಳಗ್ಗೆ 10:45ರ ವೇಳೆಗೆ ತನ್ನ ಮಾರ್ಗದಿಂದ ತಪ್ಪಿಸಿಕೊಂಡ ಪರಿಣಾಮವಾಗಿ, ಇಸ್ರೋ ತನ್ನ ಕಾರ್ಯಾಚರಣೆ ಯೋಜನೆಯನ್ನು ಸ್ಥಗಿತಗೊಳಿಸಿದೆ. ಎಲ್ಲಾ 16 ಉಪಗ್ರಹಗಳು ಬಾಹ್ಯಾಕಾಶದಲ್ಲಿ ಲೀನವಾಗಿವೆ.
ರಾಕೆಟ್‌ನ ಮೂರನೇ ಹಂತದಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ, ಡಿಆರ್‌ಡಿಒದ ಅನ್ವೇಷಾ ಕಣ್ಗಾವಲು ಉಪಗ್ರಹ ಮತ್ತು ಖಾಸಗಿ ವಲಯದ 7 ಉಪಗ್ರಹಗಳು ಸೇರಿದಂತೆ ಒಟ್ಟು 16 ಉಪಗ್ರಹಗಳು ನಿಗದಿತ ಕಕ್ಷೆ ಸೇರಲು ಸಾಧ್ಯವಾಗಿಲ್ಲ. ಮೂರನೇ ಹಂತದಲ್ಲಿ ರಾಕೆಟ್ ತನ್ನ ಮಾರ್ಗ ಬದಲಾಯಿಸಿದ್ದರಿಂದ ಯೋಜನೆ ವಿಫಲವಾಗಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ.
ಈ ಕುರಿತು ಮಾತನಾಡಿರುವ ಇಸ್ರೋ ಅಧ್ಯಕ್ಷ ವಿ. ನಾರಾಯಣನ್, “ಇಂದು, ನಾವು ಪಿಎಸ್‌ಎಲ್‌ವಿ ಸಿ62 / ಇಒಎಸ್ – ಎನ್1 ಮಿಷನ್ ಅನ್ನು ಕಕ್ಷೆಗೆ ಸೇರಿಸಲು ಪ್ರಯತ್ನಿಸಿದ್ದೇವೆ. ಆದರೆ ರಾಕೆಟ್ ಹಾರಾಟದ ಮಾರ್ಗದಲ್ಲಿ ವಿಚಲನೆ ಕಂಡುಬಂದಿದ್ದು, ಮಿಷನ್ ನಿರೀಕ್ಷಿತ ಮಾರ್ಗದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ನಾವು ಎಲ್ಲಾ ನೆಲದ ಕೇಂದ್ರಗಳಿಂದ ಮಾಹಿತಿಯನ್ನು ಪರಿಶೀಲಿಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ವೈಫಲ್ಯದಿಂದ ಎದೆಗುಂದದೆ ಭವಿಷ್ಯದ ಯೋಜನೆಗಳನ್ನು ಸಫಲಗೊಳಿಸುವ ಇರಾದೆಯನ್ನೂ ಇಸ್ರೋ ಹೊರಹಾಕಿದೆ. ಇಸ್ರೋದ ಮೊದಲ ವರ್ಷದ ಕಾರ್ಯಾಚರಣೆ ಹಿನ್ನಡೆ, ಅದರ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಮೇಲೆ ಯಾವ ಪರಿಣಾಮವನ್ನೂ ಬೀರದು ಎಂಬುದು ಸ್ಪಷ್ಟವಾಗಿದೆ.


