ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷಗಳ ನಾಯಕ ರಾಹುಲ್ ಗಾಂಧಿ ಹಿಂದುಗಳನ್ನು ಅವಮಾನಿಸಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ಆಡಿರುವ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಭಾರತೀಯ ಜನತಾ ಪಕ್ಷ ಸೋಮವಾರ ಬಲವಾದ ತಿರುಗೇಟು ನೀಡಿದ್ದಾರೆ.
ಸಂಸತ್ನಲ್ಲಿ ಸಂವಿಧಾನದ ಪ್ರತಿ ಮತ್ತು ಶಿವ, ಪ್ರವಾದಿ ಮೊಹಮ್ಮದ್, ಯೇಸುಕ್ರಿಸ್ತ ಮತ್ತು ಗುರುನಾನಕ್ ದೇವ್ ಸೇರಿದಂತೆ ಧಾರ್ಮಿಕ ಆರಾಧಕರ ಫೋಟೋಗಳನ್ನು ಪ್ರದರ್ಶಿಸಿದ್ದ ರಾಹುಲ್ ಗಾಂಧಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್ಎಸ್ಎಸ್ ವಿರುದ್ಧ ಮಾತನಾಡಿದ್ದರು. ಅದಾದ ಬಳಿಕ ತಿರುಗೇಟು ನೀಡಿರುವ ಬಿಜೆಪಿ ಹಿಂದುಗಳನ್ನು ಅಪಮಾನಿಸಲಾಗುತ್ತಿದೆ ಎಂದು ಆರೋಪಿಸಿದೆ.
ಶಿವನ ಚಿತ್ರವನ್ನು ನೋಡುವ ಹಿಂದುಗಳು ಎಂದಿಗೂ ಭಯ ಮತ್ತು ದ್ವೇಷ ಹರಡಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆ. ಆದರೆ ಬಿಜೆಪಿ ದಿನದ 24 ಗಂಟೆಯೂ ಭಯ ಮತ್ತು ದ್ವೇಷ ಹರಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಅದೇ ರೀತಿ ರಾಹುಲ್ ಪ್ರವಾದಿ ಮೊಹಮ್ಮದ್ ಮತ್ತು ಗುರುನಾನಕ್ ದೇವ್ ಅವರ ಚಿತ್ರಗಳನ್ನು ಪ್ರದರ್ಶಿಸಿದರು. ಇದಕ್ಕಾಗಿ ಸ್ಪೀಕರ್ ಓಂ ಬಿರ್ಲಾ ಅವರು ಅವರನ್ನು ತರಾಟೆಗೆ ತೆಗೆದುಕೊಂಡರು.
ಮೋದಿ ಜಿ, ಬಿಜೆಪಿ ಮತ್ತು ಆರ್ಎಸ್ಎಸ್ ಇಡೀ ಹಿಂದೂ ಸಮುದಾಯವಲ್ಲ ಎಂದು ರಾಹುಲ್ ಗಾಂಧಿ ಕೂಗಿದಕ್ಕೆ ಗೃಹ ಮಂತ್ರಿ ಅಮಿತ್ ಶಾಳ ಪ್ರತಿಕ್ರಿಯೆ ನೀಡಿದ್ದಾರೆ. ಹಿಂಸಾಚಾರವನ್ನು ಯಾವುದೇ ಧರ್ಮದೊಂದಿಗೆ ತಳುಕು ಹಾಕುವುದು ತಪ್ಪು ಎಂದು ಅವರು ಘೋಷಿಸಿದರು. ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಅಮಿತ್ ಶಾ ಆಗ್ರಹಿಸಿದರು. ಇದೇ ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಮತ್ತು 1984 ರ ಸಿಖ್ ವಿರೋಧಿ ದಂಗೆಗಳನ್ನು ಉಲ್ಲೇಖಿಸಿದರು. ಎಲ್ಲಾ ಹಿಂದುಗಳು ಹಿಂಸೆಯ ಪ್ರೇರಕರು ಎಂಬ ಹೇಳಿಕೆಗಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಶಾ ಹೇಳಿದರು.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎಕ್ಸ್ ನಲ್ಲಿ ಸರಣಿ ಪೋಸ್ಟ್ ಗಳ ಮೂಲಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದರು. ಕಾಂಗ್ರೆಸ್ ನಾಯಕ ಸ್ಪಷ್ಟವಾಗಿ ಸುಳ್ಳು ಹೇಳಿದ್ದಾರೆ ಎಂದು ಅವರು ಆರೋಪಿಸಿದರು. ಅಧಿಕಾರ ಹಿಡಿಯಲು ವಿರೋಧ ಪಕ್ಷಗಳ ನಾಯಕರು ದೋಷಪೂರಿತ ತರ್ಕ ಮಾಡುತ್ತಾರೆ. ಅವರು 2024ರ ಚುನಾವಣೆಯ ಜನಾದೇಶವನ್ನು (ಸತತ ಮೂರನೇ ಸೋಲು) ಅರ್ಥಮಾಡಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.