ಹೊಸದಿಗಂತ ವರದಿ,ಶಿವಮೊಗ್ಗ:
ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವರ ನಿತಿನ್ ಜೈರಾಂ ಗಡ್ಕರಿಯವರನ್ನು ಸಂಸದ ಬಿ.ವೈ.ರಾಘವೇಂದ್ರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಬೇಕಾದ ಹೆದ್ದಾರಿ ಕಾಮಗಾರಿಗಳ ಅಗತ್ಯತೆಗಳ ಬಗ್ಗೆ ಚರ್ಚಿಸಿದರು.
ಆಗುಂಬೆಘಾಟಿ ರಸ್ತೆಗೆ ಪರ್ಯಾಯವಾಗಿ ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗ ಮಾರ್ಗದ ರಸ್ತೆ ನಿರ್ಮಾಣ, ಕುಂದಾಪುರದಿಂದ ಗಂಗೊಳ್ಳಿ ಬಂದರಿನವರೆಗೆ 5.60 ಕಿ.ಮೀ ಉದ್ದದ ರಸ್ತೆ ಹಾಗು ಭಾರಿ ಸೇತುವೆ ನಿರ್ಮಾಣ, ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ವಿವಿಧೋದ್ದೇಶ ಬಂದರಿನವರೆಗೆ ತಾರಾಪತಿ ಅಳವೆಕೋಡಿ ಮೂಲಕ ವಿಸ್ತರಣೆ ಮಾಡಿ 3.80 ಕಿ.ಮೀ ಉದ್ದದ ರಸ್ತೆ ಹಾಗು ಸೇತುವೆಗಳ ನಿರ್ಮಾಣ, ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ರಾಣಿಬೆನ್ನೂರಿನವರೆಗೆ ಬಾಕಿ ಉಳಿದ ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ, ರಾ. ಹೆದ್ದಾರಿ 369 ಇ ಸಾಗರದಿಂದ ಮರಕುಟಕವರೆಗೆ ದ್ವಿಪಥ ರಸ್ತೆ (ಸಾಗರ ಪಟ್ಟಣದ ಬೈಪಾಸ್ ರಸ್ತೆ ಸೇರಿ) ನಿರ್ಮಾಣಕ್ಕೆ ಅನುದಾನ ಕೋರಿ ಮನವಿ ಸಲ್ಲಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಗಡ್ಕರಿ, ಸಂಬಂದಿಸಿದ ಕೇಂದ್ರ ಭೂಸಾರಿಗೆ ಮಂತ್ರಾಲಯದ ಅಧಿಕಾರಿಗಳಿಗೆ ಸದರಿ ಕಾಮಗಾರಿಗಳ ಯೋಜನಾವರದಿ ತಯಾರಿಸಲು ಸಮಾಲೋಚಕರನ್ನು ತಕ್ಷಣ ನಿಯೋಜಿಸಲು ಸೂಚಿಸಿದರು.
ಕ್ಷೇತ್ರದ ಹೆದ್ದಾರಿಗಳ ಸಮಗ್ರ ಅಭಿವೃದ್ಧಿಗೆ ತಮ್ಮ ಬೆಂಬಲ ನೀಡುತ್ತಿರುವ ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವ ನಿತಿನ್ ಜೈರಾಂ ಗಡ್ಕರಿಯವರಿಗೆ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ .