ಹೊಸದಿಗಂತ ವರದಿ ಮಡಿಕೇರಿ:
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸರಕಾರ ಯುವ ಪೀಳಿಗೆಯ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳದೆ ಯುವಕರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಆರೋಪಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ 24 ಲಕ್ಷ ಯುವಕ, ಯುವತಿಯರು ನೀಟ್ ಪರೀಕ್ಷೆ ಎದುರಿಸಿದ್ದಾರೆ. ಸಿಬಿಐಗೆ ಪ್ರಕರಣ ವರ್ಗಾವಣೆಯಾಗಿರುವುದರಿಂದಾಗಿ ಅನೇಕ ಅಕ್ರಮಗಳು ಬೆಳಕಿಗೆ ಬರುತ್ತಿದೆ.ಆದರೆ ಯುವ ಪೀಳಿಗೆಯ ಸಂಕಷ್ಟಗಳನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು.
ನೀಟ್’ನಂತೆಯೇ ಅನೇಕ ಪರೀಕ್ಷೆಗಳಲ್ಲಿಯೂ ಹಗರಣ ನಡೆದಿದೆ. ಕೇಂದ್ರ ಸರ್ಕಾರ ಇಂತಹ ಹಗರಣಗಳಲ್ಲಿ ಯಾರನ್ನೋ ರಕ್ಷಿಸಲು ಮುಂದಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಸಿಇಟಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಿದ್ದೇವೆ. ದೇಶದಲ್ಲಿಯೇ ಪಾರದರ್ಶಕ ಪರೀಕ್ಷಾ ಪದ್ದತಿಗಳಿಗೆ ಕರ್ನಾಟಕ ಸರ್ಕಾರ ಮಾದರಿಯಾಗಿದೆ ಎಂದು ಸಚಿವರು ನುಡಿದರು.
ಮಡಿಕೇರಿ ಶಾಸಕ ಡಾ, ಮಂಥರ್ ಗೌಡ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಟಿ.ಪಿ. ರಮೇಶ್ ಸೇರಿದಂತೆ ಪ್ರಮುಖರು ಹಾಜರಿದ್ದರು.