ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಖ್ಯಸ್ಥೆ ರೇಖಾ ಶರ್ಮಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಟಿಎಂಸಿ (TMC) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜುಲೈ 1ರಂದು ಜಾರಿಗೆ ಬಂದ ಹೊಸ ಕಾನೂನುಗಳ ಪೈಕಿ ಒಂದಾದ ಭಾರತೀಯ ನ್ಯಾಯ ಸಂಹಿತೆ (BNS) ಅನ್ವಯ ಮಹುವಾ ಮೊಯಿತ್ರಾ ಅವರ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಕಾಲ್ತುಳಿತದಿಂದ 121 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ರೇಖಾ ಶರ್ಮಾ ಅವರು ಹತ್ರಾಸ್ಗೆ ಭೇಟಿ ನೀಡಿದ ವಿಡಿಯೊವನ್ನು ಮಹುವಾ ಮೊಯಿತ್ರಾ ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ‘ತಮ್ಮ ಬಾಸ್ನ ಪೈಜಾಮಾ ಹಿಡಿದುಕೊಳ್ಳುವುದರಲ್ಲಿಯೇ ಇವರು ನಿರತರಾಗಿದ್ದಾರೆ’ ಎಂಬುದಾಗಿ ಟಿಎಂಸಿ ಸಂಸದೆ ಬರೆದುಕೊಂಡಿದ್ದರು.
ಮಹುವಾ ಮೊಯಿತ್ರಾ ಅವರ ಪೋಸ್ಟ್ ವೈರಲ್ ಆಗುತ್ತಲೇ ರಾಷ್ಟ್ರೀಯ ಮಹಿಳಾ ಆಯೋಗವು ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ, ಟಿಎಂಸಿ ಸಂಸದೆ ವಿರುದ್ಧ ಎಫ್ಐಆರ್ ದಾಖಲಿಸಬೇಕು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ದೆಹಲಿ ಪೊಲೀಸರಿಗೆ ಸೂಚಿಸಲಾಗಿತ್ತು. ಅಲ್ಲದೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೂ ರಾಷ್ಟ್ರೀಯ ಮಹಿಳಾ ಆಯೋಗವು ಪತ್ರ ಬರೆದು, ಮಹುವಾ ಮೊಯಿತ್ರಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಮನವಿ ಮಾಡಿತ್ತು. ಈಗ ಸಂಸದೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.