ಸೂರು ಇಲ್ಲದ ಮಹಿಳೆಗೆ ನಿಂತ ಜಾಗದಲ್ಲಿಯೇ ಮನೆ ಮಂಜೂರು ಮಾಡಿದ ಯೋಗಿ ಆದಿತ್ಯನಾಥ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಜ್ಯದಲ್ಲಿ ಅಘೋಷಿತ ‘ಇನ್‌ಸ್ಟಂಟ್‌ ಜಸ್ಟಿಸ್’‌ (Instant Justice) ಎಂಬ ಪದ್ಧತಿ ಜಾರಿಗೆ ತಂದಿದ್ದಾರೆ. ಇದರಿಂದ ಮಹಿಳೆ ಮೇಲೆ ಅತ್ಯಾಚಾರ ಎಸಗುವವರು, ಅಪರಾಧ ಕೃತ್ಯಗಳಲ್ಲಿ ತೊಡಗಿದವರ ಎನ್‌ಕೌಂಟರ್‌, ಅವರ ಮನೆ ನೆಲಸಮ ಸೇರಿ ಹಲವು ಕಠಿಣ ಕ್ರಮಗಳ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ.

ಅದರ ಜೊತೆಗೆ ತಲೆಗೊಂದು ಸೂರು ಇಲ್ಲದ ಮಹಿಳೆಗೆ ನಿಂತ ಜಾಗದಲ್ಲಿಯೇ ಮನೆ ಮಂಜೂರು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇಂದು ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರದ ಟಿಪಿ ನಗರ ಫ್ಲೈಓವರ್‌ ಹಾಗೂ ಷಟ್ಪಥ ರಸ್ತೆ ನಿರ್ಮಾಣದ ಕಾಮಗಾರಿ ಪರಿಶೀಲನೆ ನಡೆಸುವಾಗ, ಮನೆ ಇಲ್ಲದ ಕುರಿತು ಸಮಸ್ಯೆ ಹೇಳಿಕೊಂಡ ಮಂಜು ಎಂಬ ಮಹಿಳೆಗೆ ಶೀಘ್ರದಲ್ಲೇ ಸುಸಜ್ಜಿತ ಮನೆ ನಿರ್ಮಿಸಿಕೊಡಬೇಕು ಎಂಬುದಾಗಿ ಸೂಚಿಸಿದರು. ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಮಹಿಳೆಗೆ ಮನೆ ನಿರ್ಮಿಸಿಕೊಡಬೇಕು ಎಂಬುದಾಗಿ ಅಧಿಕಾರಿಗಳಿಗೆ ಆದೇಶ ನೀಡಿದರು.

ಮಂಜು ಎಂಬ ಮಹಿಳೆಯು ದಿಯೋರಿಯಾ ಬೈಪಾಸ್‌ ರಸ್ತೆಯ ಬಳಿ ಶೆಡ್‌ನಲ್ಲಿ ವಾಸಿಸುತ್ತಿದ್ದಾರೆ. ಮಗಳ ಜತೆ ಅವರು ವಾಸಿಸುತ್ತಿದ್ದು, ಸ್ವಂತದ್ದೊಂದು ಮನೆ ನಿರ್ಮಿಸಿಕೊಡಿ ಎಂಬುದಾಗಿ ಮುಖ್ಯಮಂತ್ರಿ ಬಳಿ ಅಳಲು ತೋಡಿಕೊಂಡರು. ಆಗ ಕೂಡಲೇ ಯೋಗಿ ಆದಿತ್ಯನಾಥ್‌ ಅವರು, ಮಹಿಳೆಯು ಎಲ್ಲಿ ಸ್ವಂತ ಜಾಗ ಹೊಂದಿದ್ದಾರೋ, ಅಲ್ಲಿಯೇ ಮನೆ ನಿರ್ಮಿಸಿಕೊಡಿ ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದರು.

‘ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿಯಾಗಿ, ನಮಗೊಂದು ಮನೆ ನಿರ್ಮಿಸಿಕೊಡಿ ಎಂಬುದಾಗಿ ಮನವಿ ಮಾಡಿದೆ. ನನ್ನ ಆರ್ಥಿಕ ದುಸ್ಥಿತಿಯ ಬಗ್ಗೆ ಅವರಿಗೆ ವಿವರಣೆ ನೀಡಿದೆ. ಒಂದು ಕ್ಷಣವೂ ಯೋಚಿಸದೆ ಅವರು ನಮಗೆ ಮನೆ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ನಮಗೆ ಭಾರಿ ಖುಷಿಯಾಗಿದೆ. ಯೋಗಿ ಆದಿತ್ಯನಾಥ್‌ ಅವರಿಗೆ ಧನ್ಯವಾದಗಳು’ ಎಂಬುದಾಗಿ ಮಹಿಳೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!