ದಿಗಂತ ವರದಿ ಹುಬ್ಬಳ್ಳಿ:
ವಿದ್ಯಾರ್ಥಿ ಓರ್ವ ಇಲ್ಲಿನ ಶಿರಡಿನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ವಿಜಯಪುರದ ರಾಕೇಶ ಶ್ರೀಶೈಲ್ ಜಂಬಲದಿನ್ನಿ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ರಾಕೇಶ ಬುಧವಾರ ಸಂಜೆ ಹಾಸ್ಟೆಲ್ ಕೊಠಡಿಯಲ್ಕಿ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಕೇಶ ಅವರು ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್)6ನೇ ಸೆಮಿಸ್ಟರ್ ಓದುತ್ತಿದ್ದರು ಎಂದು ತಿಳಿದು ಬಂದಿದೆ.
ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹಾಸ್ಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿದರು.ಮೃತದೇಹವನ್ನು ಕಿಮ್ಸ್ ಶವಾಗಾರದಲ್ಲಿ ಇರಿಸಲಾಗಿದೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಕೇಶ ಮೊಬೈಲ್ ಆ್ಯಪ್ ಗಳಲ್ಲಿ ಗೇಮ್ ಆಡುತ್ತಿದ್ದ. ಅದರಲ್ಲಿ ಹಣ ಕಳೆದುಕೊಂಡಿದ್ದ ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ. ಈ ಬಗ್ಗೆ ಆತನ ಪೋಷಕರಿಗೂ ಮಾಹಿತಿ ನೀಡಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುವುದು’ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.
‘ಜುಲೈ 8ರಂದು ಪರೀಕ್ಷೆ ಮುಗಿದಿದ್ದವು. ಅವನ ಕೊಠಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಊರಿಗೆ ಹೋಗಿದ್ದರು. ಬುಧವಾರ ಎಷ್ಟು ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಕೊಠಡಿಯ ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿಯಿತು’ ಎಂದು ಹಾಸ್ಟೆಲ್ ವಿದ್ಯಾರ್ಥಿ ಸಚಿನ್ ಹೇಳಿದರು.