ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಮಲೆ ಮಹದೇಶ್ವರ ಬೆಟ್ಟದ ರಾಮಾಪುರ ರಸ್ತೆಯಲ್ಲಿ ಬೃಹತ್ ಗಾತ್ರದ ಒಂಟಿ ಸಲಗವೊಂದು ರಸ್ತೆ ದಾಟುತ್ತಿರುವ ದೃಶ್ಯ ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಕುತೂಹಲ ಮತ್ತು ಆತಂಕ ಎರಡನ್ನೂ ಸೃಷ್ಟಿಸಿದೆ.
ಹನೂರಿನಿಂದ ರಾಮಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಕಾಡಾನೆಗಳ ಸಂಚಾರ ಇತ್ತೀಚೆಗೆ ಸಾಮಾನ್ಯವಾಗಿದೆ. ಪ್ರತಿದಿನ ನೀರು ಅರಸಿ ಕಾಡಾನೆಗಳು ಹಾಗೂ ಒಂಟಿ ಸಲಗಗಳು ರಸ್ತೆ ದಾಟುತ್ತಿರುತ್ತವೆ. ಆದರೆ, ಆನೆ ಎದುರಾದಾಗ ವಾಹನಗಳನ್ನು ನಿಲ್ಲಿಸಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಬದಲು, ಅನೇಕ ವಾಹನ ಸವಾರರು ಮತ್ತು ಭಕ್ತರು ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ ಚಿತ್ರೀಕರಿಸಲು ಮುಂದಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾಡಾನೆಗಳು ಏಕಾಏಕಿ ದಾಳಿ ಮಾಡುವ ಸ್ವಭಾವ ಹೊಂದಿದ್ದು, ಸಣ್ಣ ಅಜಾಗರೂಕತೆಯೂ ದೊಡ್ಡ ಮಟ್ಟದ ಪ್ರಾಣಾಪಾಯಕ್ಕೆ ದಾರಿಯಾಗಬಹುದು. ವಿಶೇಷವಾಗಿ ಬೈಕ್ ಸವಾರರು ಆನೆಗಳಿಗೆ ತೀರಾ ಹತ್ತಿರ ಹೋಗುತ್ತಿರುವುದು ಅರಣ್ಯ ಇಲಾಖೆಯ ನಿಯಮಗಳ ಉಲ್ಲಂಘನೆಯೂ ಹೌದು. ವನ್ಯಜೀವಿಗಳ ಓಡಾಟದ ಸಮಯದಲ್ಲಿ ಅವುಗಳ ಹಾದಿಗೆ ಅಡ್ಡಿಪಡಿಸದೆ, ಶಾಂತಿಯುತವಾಗಿ ಸಾಗಲು ಬಿಡುವುದು ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯವಾಗಿದೆ.


