ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆಗಮನವಾಗಿದೆ. ನಗರದ ಕೋರಮಂಗಲ, ಶಾಂತಿನಗರ, ಕೆ.ಹೆಚ್ ರಸ್ತೆ, ವಿಧಾನಸೌಧ, ಕಬ್ಬನ್ಪಾರ್ಕ್, ಮೆಜೆಸ್ಟಿಕ್, ವಿಜಯನಗರ, ರಾಜಾಜಿನಗರ, ಬನಶಂಕರಿ ಹಾಗೂ ಜಯನಗರದ ಸುತ್ತಮುತ್ತ ಮಳೆ ಶುರುವಾಗಿದೆ.
ಗಾಳಿ ಸಹಿತ ಮಳೆಯಿಂದ ವಾಹನ ಸವಾರರ ಪರದಾಟ ನಡೆಸಿದ್ದು, ರಸ್ತೆಯಲ್ಲಿ ಮಳೆ ನೀರು ನಿಂತಿರುವುದರಿಂದ ಸಂಚಾರ ವ್ಯತ್ಯಯವಾಗಿದೆ.
ಸಂಜೆಯಾಗುತ್ತಿದ್ದಂತೆ ನಗರದಲ್ಲಿ ಸುರಿದ ಮಳೆಗೆ ರಸ್ತೆಯಲ್ಲಿಯೇ ಮಳೆ ನೀರು ಹೆಚ್ಚಾಗಿದೆ. ಈ ಹಿನ್ನಲೆ ವಾಹನಗಳು ನಿಧಾನವಾಗಿ ಸಂಚರಿಸುತ್ತಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಎಲೆಕ್ಟ್ರಾನಿಕ್ ಸಿಟಿ ಹಂತ-2 ವೀರಸಂದ್ರ ವೃತ್ತದಲ್ಲಿ ರಸ್ತೆಯಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯಲ್ಲಿ ವಾಹನ ಸಂಚಾರವಿದೆ. ಜೊತೆಗೆ ಕಸ್ತೂರಿನಗರ ಡೌನ್ ರ್ಯಾಂಪ್, ಕ್ವೀನ್ಸ್ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಅನಿಲ್ ಕುಂಬ್ಳೆ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ.
ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸುತ್ತಮುತ್ತ ಕೂಡ ಧಾರಾಕಾರ ಮಳೆಯಾಗುತ್ತಿದೆ.
ಇನ್ನು ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಚಿತ್ರದುರ್ಗ, ದಾವಣಗೆರೆ, ಹಾಸನ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.