ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಸಲ ನಮ್ಮ ಸರಕಾರ ಪ್ರಕರಣವನ್ನು ಲೋಕಾಯುಕ್ತಕ್ಕೆ ಕೊಟ್ಟ ಮೇಲೆ ಸಿಬಿಐಯವರು ತನಿಖೆ ಮಾಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ಆರಂಭಿಸಿರುವ ತನಿಖೆಯನ್ನು ಕೈಬಿಡುವಂತೆ ಸೂಚಿಸಬೇಕು ಎಂದು ಡಿಕೆ ಶಿವಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಬಿಐ ಎಫ್ಐಆರ್ ವಜಾ ಮಾಡಬೇಕು ಅಂತ ಕೇಳಿದ್ದೆವು. ಹೈಕೋರ್ಟ್ನಲ್ಲಿ ಮಾಡಲು ಆಗುವುದಿಲ್ಲ ಎಂದಿದ್ದರು. ಹೀಗಾಗಿ ಅಪೀಲ್ ಹಾಕಿದ್ದೆ. ಅಲ್ಲೂ ಏನೂ ಮಾಡಲು ಆಗುವುದಿಲ್ಲ ಎಂದು ನಿರ್ಣಯ ಬಂದಿದೆ. ಕೋರ್ಟ್ ಏನು ಹೇಳುತ್ತದೋ ಕೇಳೋಣ. ತನಿಖೆ ನಡೆಯಲಿ ಎಂದು ಡಿಕೆ ಶಿವಕುಮಾರ್ ಹೇಳಿದರು.
ಲೋಕಾಯುಕ್ತದವರು ಇನ್ವೆಸ್ಟಿಗೇಶನ್ ಮಾಡುತ್ತಿದ್ದಾರೆ. CBIನವರಿಗೆ ಮಾಡಬೇಡಿ ಅಂತ ಹೇಳಿದರೂ ಮಾಡುತ್ತಿದ್ದಾರೆ. ಏನು ಬೇಕಾದರೂ ಮಾಡಲಿ, ನನ್ನದೇನೂ ತಪ್ಪಿಲ್ಲ. ನಮ್ಮ ಸರ್ಕಾರ ಒಂದು ಸಲ ವಿತ್ಡ್ರಾ ಮಾಡಿದ ಮೇಲೆ ಮುಗಿಯಿತು. ನನ್ನ ಆಸ್ತಿ ದಾಖಲೆ ಏನಿದೆ ಕೊಡ್ತೀನಿ ಎಂದು ಡಿಕೆಶಿ ತಿಳಿಸಿದರು.
ಕೇಂದ್ರ ಸರ್ಕಾರ ಇದನ್ನು ಉದ್ದೇಶಪೂರ್ವಕ ಮಾಡುತ್ತಿದೆಯಾ ಎಂಬ ಪ್ರಶ್ನೆಗೆ ʼಕೋರ್ಟ್ ಬಗ್ಗೆ ಏನು ಮಾತನಾಡಲೂ ಆಗುವುದಿಲ್ಲ. ಕೋರ್ಟ್ ಹೇಳಿದಂತೆ ಕೇಳಬೇಕುʼ ಎಂದು ಡಿಕೆಶಿ ಉತ್ತರಿಸಿದರು.