ಹೊಸದಿಗಂತ ತುಮಕೂರು :
ದಂತ ಚಿಕಿತ್ಸಾಲಯಕ್ಕೆ ತಪಾಸಣೆಗೆ ಬಂದಿದ್ದ ಯುವತಿಯ ಮೇಲೆ ವೈದ್ಯನೇ ಅತ್ಯಾಚಾರ ಮಾಡಿರುವ ಬಗ್ಗೆ ಆರೋಪಿಸಿ ನಗರದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ತುಮಕೂರು ನಗರದ ಶೆಟ್ಟಿಹಳ್ಳಿ ಗೇಟ್ ಬಳಿಯ ರಾಘವೇಂದ್ರ ಮಠದ ಎದುರಿನ ದಂತ ಚಿಕಿತ್ಸಾಲಯದಲ್ಲಿ ಶುಕ್ರವಾರ ಸಂಜೆ ಚಿಕಿತ್ಸೆ ಪಡೆಯಲು ಬಂದ ಯುವತಿಯ ಮೇಲೆ ದಂತವೈದ್ಯ ಡಾ.ಸಂಜಯ್ ನಾಯಕ್ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಿಂದ ನಗರದ ಜನರು ಬೆಚ್ಚಿ ಬಿದ್ದಿದ್ದಾರೆ.
ಆರೋಪಿ ವೈದ್ಯ ಶುಕ್ರವಾರ ಸಂಜೆ ಯುವತಿಯ ಮೇಲೆ ಅತ್ಯಾಚಾರ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರ ಒಳಗಾದ ಯುವತಿ ಮನೆಗೆ ತೆರಳಿ ಮಂಕಾಗಿ ಕುಳಿತಿದ್ದಳು. ಆಗ ತಂದೆ-ತಾಯಿ ವಿಚಾರಿಸಲಾಗಿ ದಂತ ವೈದ್ಯ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದರು ಎನ್ನಲಾಗಿದೆ.
ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದು ಆರೋಪಿ ವೈದ್ಯನನ್ನು ಬಂಧಿಸಿದ್ದು, ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.