ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ನೆಲದಲ್ಲಿ ಸಿನಿಮಾ ಮತ್ತು ರಾಜಕೀಯದ ನಡುವಿನ ನಂಟು ಹೊಸದೇನಲ್ಲ. ಆದರೆ ಈಗ ದಳಪತಿ ವಿಜಯ್ ಅವರ ‘ಜನ ನಾಯಗನ್’ ಬಿಡುಗಡೆಗೆ ಎದುರಾಗಿರುವ ವಿಘ್ನ ಮತ್ತು ಸುಧಾ ಕೊಂಗರ ನಿರ್ದೇಶನದ ‘ಪರಾಶಕ್ತಿ’ ಚಿತ್ರದ ಸೋಲಿನ ಸುತ್ತ ದೊಡ್ಡ ವಿವಾದವೇ ಸೃಷ್ಟಿಯಾಗಿದೆ.
ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿರುವುದು ರಾಜಕೀಯ ಪಿತೂರಿ ಎಂಬ ಮಾತುಗಳು ಕೇಳಿಬರುತ್ತಿವೆ. ಇದೊಂದು ತೆಲುಗು ರಿಮೇಕ್ ಚಿತ್ರವಾಗಿದ್ದರೂ, ವಿಜಯ್ ಅವರ ರಾಜಕೀಯ ಪ್ರವೇಶದ ಭೀತಿಯಿಂದ ಆಡಳಿತಾರೂಢ ಡಿಎಂಕೆ ಸಿನಿಮಾ ತಡೆಯುತ್ತಿದೆ ಎಂಬ ಆರೋಪವಿದೆ. ಪ್ರಕರಣ ಈಗ ಸುಪ್ರೀಂಕೋರ್ಟ್‌ನಲ್ಲಿದೆ.
ಇದೇ ವೇಳೆ ಬಿಡುಗಡೆಯಾಗಿರುವ ‘ಪರಾಶಕ್ತಿ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. ಇದಕ್ಕೆ ಚಿತ್ರಕಥೆಯ ದೋಷ ಕಾರಣ ಎಂದು ಪ್ರೇಕ್ಷಕರು ಹೇಳುತ್ತಿದ್ದರೆ, ನಿರ್ದೇಶಕಿ ಸುಧಾ ಕೊಂಗರ ಮಾತ್ರ ವಿಜಯ್ ಅಭಿಮಾನಿಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ. “ನಮ್ಮ ಚಿತ್ರದ ವಿರುದ್ಧ ವ್ಯವಸ್ಥಿತವಾಗಿ ನೆಗೆಟಿವ್ ಪ್ರಚಾರ ಮಾಡಲಾಗುತ್ತಿದೆ. ವಿಜಯ್ ಅಭಿಮಾನಿಗಳು ನಮ್ಮ ವಿರುದ್ಧ ಬೆದರಿಕೆ ಹಾಕುತ್ತಿದ್ದಾರೆ. ನೀವು ವಿಜಯ್ ಸಿನಿಮಾ ಜೊತೆ ಸ್ಪರ್ಧೆಗೆ ಇಳಿದಿದ್ದಕ್ಕೆ ಕ್ಷಮೆ ಕೇಳಿ ಎಂದು ಪೋಸ್ಟ್ ಮಾಡುತ್ತಿದ್ದಾರೆ” ಎಂದು ಸುಧಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಪರಾಶಕ್ತಿ’ ಸಿನಿಮಾ ಡಿಎಂಕೆ ಸರ್ಕಾರದ ಪರವಾಗಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧವಾಗಿ ಧ್ವನಿ ಎತ್ತಿದೆ ಎಂಬ ಚರ್ಚೆ ಇದೆ. ಈ ಕಾರಣಕ್ಕಾಗಿಯೇ ಸರ್ಕಾರಿ ಯಂತ್ರ ವಿಜಯ್ ಸಿನಿಮಾವನ್ನು ತುಳಿದು, ‘ಪರಾಶಕ್ತಿ’ಗೆ ಹಾದಿ ಮಾಡಿಕೊಟ್ಟಿತೇ? ಎಂಬ ಸಂಶಯ ದಟ್ಟವಾಗಿದೆ. ಆದರೆ ವಿಜಯ್ ಅಭಿಮಾನಿಗಳ ‘ಸೋಷಿಯಲ್ ಮೀಡಿಯಾ ವಾರ್’ ಮುಂದೆ ಪರಾಶಕ್ತಿ ಮಂಕಾಗಿದೆ ಎಂಬುದು ಸದ್ಯದ ಸತ್ಯ.


