ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಖ್ಯಾತ ಭೂಗಳ್ಳ ಜಾನ್ ಮೋಸೆಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ನಕಲಿ ಆಸ್ತಿ ದಾಖಲೆಗಳನ್ನು ಸೃಷ್ಟಿಸಿ ನಗರದಲ್ಲಿ 100 ಕ್ಕೂ ಹೆಚ್ಚು ನಿವೇಶನಗಳನ್ನು ಕಬಳಿಸಿದ ಆರೋಪದ ಮೇಲೆ ಕುಖ್ಯಾತ ಭೂಗಳ್ಳರ ವಿರುದ್ಧ ಸಿಐಡಿ ಕಠಿಣ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ, 2000 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಮಾರುತಿ ಸೇವಾನಗರ ನಿವಾಸಿ ಜಾನ್ ಮೋಸೆಸ್ (49) ಬಂಧಿತ ಆರೋಪಿಯಾಗಿದ್ದು, ಸಿಐಡಿ ವಶಕ್ಕೆ ಪಡೆದಿದ್ದಾರೆ. ಸಿಐಡಿ ಅಧಿಕಾರಿಗಳು ಸೋಮವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೋಸೆಸ್ ಮತ್ತು ಆತನ ಸಹಚರರು 2017 ರಿಂದ 2021 ರವರೆಗೆ ಅಪರಾಧ ಪ್ರಕರಣಗಳಲ್ಲಿ ಸಕ್ರಿಯರಾಗಿದ್ದರು. ಇವರ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸಿಐಡಿ 51 ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
2020ರಲ್ಲಿ ಜಾನ್ ಮೊಸೆಸ್‌ನಿಂದ ಭೂಮಿ ಕಳೆದುಕೊಂಡವರು ಹಲಸೂರು ಗೇಟ್‌ನಲ್ಲಿ ದೂರು ದಾಖಲಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು. ಸಿಐಡಿ ಹೆಚ್ಚಿನ ತನಿಖೆ ನಡೆಸಿದ ವೇಳೆ ಆರೋಪಿ ವಿರುದ್ಧ 110 ಭೂ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಜತೆಗೆ, ನೂರಾರು ಮಂದಿ ಬಡವರು, ದುರ್ಬಲರು ನಿವೇಶನ, ಭೂಮಿ ಕಳೆದುಕೊಂಡಿರುವುದು ಪತ್ತೆಯಾಗಿತ್ತು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.