ಹೊಸದಿಗಂತ ವರದಿ, ಕಲಬುರಗಿ:
ದಿನನಿತ್ಯ ಶಾಲೆಯ ನಿಗದಿತ ಸಮಯಕ್ಕೆ ಶಿಕ್ಷಕರು ಬಾರದ ಹಿನ್ನೆಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸರ್ಕಾರಿ ಶಾಲೆಯ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಕಲಬುರಗಿ ತಾಲೂಕಿನ ಸೀತನೂರ್ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ ತಾಲೂಕಿನ ಸೆಂಟ್ರಲ್ ಜೈಲ್ ಬಳಿಯಿರುವ ಸೀತನೂರ್ ಗ್ರಾಮದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಶಿಕ್ಷಕರು ದಿನನಿತ್ಯ ಸರಿಯಾದ ಸಮಯಕ್ಕೆ ಬಾರದೆ ಬೇಕಾಬಿಟ್ಟಿ ಸಮಯಕ್ಕೆ ಬರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
೧೪೬ ವಿಧ್ಯಾರ್ಥಿಗಳು ಹೊಂದಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೧೦ ಜನ ಶಿಕ್ಷಕರು ಇದ್ದಿದ್ದು,ಪ್ರತಿ ದಿನ ಶಾಲೆಗೆ ೪ ರಿಂದ ೫ ಜನ ಶಿಕ್ಷಕರು ಮಾತ್ರ ಬರುತ್ತಿದ್ದಾರೆ. ಇದನ್ನು ಗಮನಿಸಿದ ಗ್ರಾಮದವರು ಆಕ್ರೋಶಗೊಂಡು ಮಕ್ಕಳು ಹಾಗೂ ಪೋಷಕರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಇನ್ನೂ ಸರಿಯಾದ ಸಮಯಕ್ಕೆ ಶಾಲೆಗೆ ಶಿಕ್ಷಕರು ಬಾರದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು ಮತ್ತು ಮೇಲಾಧಿಕಾರಿಗಳ ವಿರುದ್ಧ ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ.