ಹೊಸದಿಗಂತ ವರದಿ, ಮಡಿಕೇರಿ:
ಸರಕಾರಿ ಸಿಬ್ಬಂದಿಯೊಬ್ಬರು ಕುಶಾಲನಗರದಲ್ಲಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ನಡೆಸುತ್ತಿದ್ದಾರೆ.
ಮಡಿಕೇರಿ ಉಪ ವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಅರುಣ್ ಕೆ.ಎಸ್ (52)ಎಂಬವರೇ ನದಿಗೆ ಹಾರಿರುವವರೆನ್ನಲಾಗಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲವಾದರೂ, ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ಪ್ರಸಕ್ತ ಕುಶಾಲನಗರದಲ್ಲಿ ತನ್ನ ಪತ್ನಿ ಹಾಗೂ ಒರ್ವ ಪುತ್ರನೊಂದಿಗೆ ವಾಸವಾಗಿದ್ದ ಅರುಣ್, ಕಳೆದ ಒಂದೂವರೆ ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗದೆ ವೈದ್ಯಕೀಯ ರಜೆ ಪಡೆದಿದ್ದರು ಎನ್ನಲಾಗಿದೆ.
ಬುಧವಾರ ಬೆಳಗ್ಗೆ 10 ಗಂಟೆಗೆ ಕಚೇರಿ ಆಗಮಿಸಿ ಸ್ವಲ್ಪ ಹೊತ್ತು ಕೆಲಸ ನಿರ್ವಹಿಸಿ ಕಚೇರಿಯಿಂದ ತೆರಳಿದ್ದ ಅವರು ಕುಶಾಲನಗರದ ಸೇತುವೆ ಬಳಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಸೇತುವೆಯ ಸಮೀಪ ಅರುಣ್ ಅವರಿಗೆ ಸೇರಿದ ಬ್ಯಾಗ್ ಪತ್ತೆಯಾಗಿದೆ.
ಕುಶಾಲನಗರ ಅಗ್ನಿಶಾಮಕ ತಂಡ ಮತ್ತು ಪೊಲೀಸರಿಂದ ನದಿಯಲ್ಲಿ ಹುಡುಕಾಟ
ವ್ಯಕ್ತಿಯೊಬ್ಬರು ನದಿಗೆ ಹಾರಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ತೆಪ್ಪದ ಮೂಲಕ ಶೋಧ ಕಾರ್ಯ ನಡೆಸಿದರಾದರೂ, ಯಾವುದೇ ಸುಳಿವು ದೊರಕಿಲ್ಲ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಮುಂದುವರೆಸಿದ್ದು, ಮಳೆಯಿಂದಾಗಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಶೋಧ ಕಾರ್ಯಕ್ಕೆ ತೊಡಕಾಗಿದೆ.
ಈ ಹಿಂದೆ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಸೇವೆ ಸಲ್ಲಿಸಿದ ಅರುಣ್, ಕಳೆದ ಐದು ವರ್ಷಗಳಿಂದ ಮಡಿಕೇರಿಯ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದು,ಅವರ ಮತ್ತೋರ್ವ ಪುತ್ರ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿ ತಿಳಿದು ಬಂದಿದೆ