ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಫ್ರಾನ್ಸ್ನ ಮಹಾನದಿ ಸೀನ್ ಮೇಲೆ ಉದ್ಘಾಟನ ಸಮಾರಂಭ ನಡೆಯಲಿದೆ.
ಭಾರತದ ಧ್ವಜಧಾರಿಯಾಗಿ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಅವರು ಟೇಬಲ್ ಟೆನಿಸ್ ಪಟು ಶರತ್ ಕಮಾಲ್ ಜತೆ ಭಾರತದ ಧ್ವಜ ಹಿಡಿದು ಪಥಸಂಚಲನದಲ್ಲಿ ಸಾಗಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ತಂಡ 84ನೇ ರಾಷ್ಟ್ರವಾಗಿ ಈ ಬಾರಿ ಕಾಣಿಸಿಕೊಳ್ಳಲಿದೆ.
ನದಿಯ ಮೇಲೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸುಮಾರು 3,000 ಮಂದಿ ಕಲಾವಿದರು ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಒಟ್ಟು 12 ವಿಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಭಾಗಿಸಲಾಗಿದೆ. ಫ್ರೆಂಚ್ ಸಂಗೀತ ಸೇರಿದಂತೆ ಭಾರತದ ಶಾಸ್ತ್ರೀಯ ಸಂಗೀತ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉದ್ಘಾಟನ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಸುಮಾರು 5 ಲಕ್ಷ ಮಂದಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಫ್ರಾನ್ಸ್ ಕಾಲಮಾನದಂತೆ ಸಾಯಂಕಾಲ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಭಾರತದಲ್ಲಿ ರಾತ್ರಿ 11 ಗಂಟೆಗೆ ನೇರಪ್ರಸಾರವಾಗಲಿದೆ. ಪ್ಯಾರಿಸ್ ಒಲಿಂಪಿಕ್ಸ್‌ನ ಅಧಿಕೃತ ಪ್ರಸಾರ ಮತ್ತು ಡಿಜಿಟಲ್ ಪಾಲುದಾರರಾಗಿರುವ ವಯಾಕಾಮ್ 18 ಜಿಯೋ ಸಿನಿಮಾ ಮೂಲಕ ಒಲಿಂಪಿಕ್ಸ್ ಸ್ಪರ್ಧೆಯನ್ನು ನೇರಪ್ರಸಾರ ಮಾಡುತ್ತಿದೆ. ಸ್ಪೋಟ್ಸ್-18 ಚಾನಲ್‌ನಲ್ಲೂ ಇದು ನೇರಪ್ರಸಾರವಾಗಲಿದೆ.
ಒಲಿಂಪಿಕ್ಸ್ ವೇಳೆಯಲ್ಲಿ ಸಂಭಾವ್ಯ ದಾಳಿಗಳು ನಡೆಯುವ ಸಾಧ್ಯತೆ ಇರುವುದರಿಂದ ಪ್ಯಾರಿಸ್ನಲ್ಲಿ ಹಿಂದೆಂದೂ ಕಾಣದ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಭದ್ರತೆಗಾಗಿ ಫ್ರಾನ್ಸ್ನೊಂದಿಗೆ ಭಾರತದ ಯೋಧರು ಕೂಡ ಕೈಜೋಡಿಸಿದ್ದಾರೆ.