ಉಕ್ಕಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ದನದ ರಕ್ಷಣೆ!

ಹೊಸದಿಗಂತ ವರದಿ,ಮಂಗಳೂರು:

ತುಂಬಿದ ನೇತ್ರಾವತಿ ನದಿಯಲ್ಲಿ ತೇಲಿ ಬರುತ್ತಿದ್ದ ದನವೊಂದನ್ನು ಉಪ್ಪಿನಂಗಡಿಯಲ್ಲಿರುವ ಗೃಹ ರಕ್ಷಕ ದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡ ಪ್ರಯಾಸದಿಂದ ರಕ್ಷಣೆ ಮಾಡಿ ದಡಕ್ಕೆ ಕರೆದುಕೊಂಡು ಬಂದ ಘಟನೆ ಉಪ್ಪಿನಂಗಡಿಯಲ್ಲಿ ಶುಕ್ರವಾರ ನಡೆದಿದೆ.

ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಪುಂಡುಪಿಲ ಎಂಬಲ್ಲಿ ಸುಮಾರು ೪೦ ಅಡಿ ಎತ್ತರದ ಗುಡ್ಡದಿಂದ ತೋಡಿಗೆ ಬಿದ್ದ ಈ ದನ ತೋಶಿನಲ್ಲಿದ್ದ ನೆರೆ ನೀರಿನಲ್ಲಿ ಕೊಚ್ಚಿ ಕೊಂಡು ನೇತ್ರಾವತಿ ನದಿಗೆ ಸೇರಿತ್ತು. ಸಮುದ್ರಮಟ್ಟದಿಂದ ೨೮.೦೫ ಮೀ. ಎತ್ತರದಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿಯಲ್ಲಿ ದನವೊಂದು ಜೀವನ್ಮರಣ ಸ್ಥಿತಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಂಡ ಹಳೆಗೇಟು ಬಳಿಯ ದಡ್ಡು ಎಂಬಲ್ಲಿರುವ ಟಯರ್ ಅಂಗಡಿಯ ಮಾಲಕ ಚಂದಪ್ಪ ಅವರು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಬೀಡು ಬಿಟ್ಟಿರುವ ಪ್ರವಾಹ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದರು.

ತಕ್ಷಣವೇ ಕಾರ್ಯಪ್ರವೃತವಾದ ಈ ತಂಡ ತಮ್ಮಲ್ಲಿರುವ ರಬ್ಬರ್ ದೋಣಿಯ ಮೂಲಕ ಉಪ್ಪಿನಂಗಡಿ ಬಳಿಯ ನೇತ್ರಾವತಿ ನದಿ ಸೇತುವೆಯ ಬಳಿ ತೆರಳುತ್ತಿರುವಾಗ ಎದುರಿನಿಂದ ನದಿಯ ಮಧ್ಯ ಭಾಗದಲ್ಲಿ ದನವು ನೀರಿನಲ್ಲಿ ಕೊಚ್ಚಿಕೊಂಡು ಬರುವುದನ್ನು ಕಂಡು ಅಲ್ಲಿಯೇ ಪ್ರಯಾಸದ ಕಾರ್ಯಾಚರಣೆ ನಡೆಸಿ, ದನದ ಮೂಗುದಾರಕ್ಕೆ ಹಗ್ಗವನ್ನು ಕಟ್ಟಿ ದೇವಾಲಯದ ಬಳಿ ದಡಕ್ಕೆ ತಂದು ಕಟ್ಟಿ ಹಾಕಿದರು.
ಗೃಹ ರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಅವರ ನೇತೃತ್ವದ ಈ ರಕ್ಷಣಾ ಕಾರ್ಯಾಚರಣ ತಂಡದಲ್ಲಿ ಎ.ಎಸ್.ಎಲ್. ಜನಾರ್ದನ, ಚರಣ್, ಸುದರ್ಶನ್, ಹಾರೀಸ್, ಸಮದ್ ಭಾಗವಹಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಮನೆಯ ಮುದ್ದು ಮಗಳಾಗಿದ್ದ ‘ಪ್ರೀತಿ’ ಎಂಬ ಹೆಸರಿನ ಈ ದನ
ಮೊಗ್ರು ಗ್ರಾಮದ ಪುಂಡುಪಿಲ ಮನೆ ನಿವಾಸಿ ವಿಶ್ವನಾಥ ಗೌಡ ಎಂಬವರ ಮನೆಯಲ್ಲಿ ಹುಟ್ಟಿ ಬೆಳೆದ ಈ ದನದ ವಯಸ್ಸು ೧ ವರ್ಷ ೭ ತಿಂಗಳು. ಪ್ರೀತಿ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಿದ್ದ ಇದು ಮೊನ್ನೆ ಮೊನ್ನೆ ತನಕ ಮನೆಯಲ್ಲಿದ್ದ ಇತರ ಎರಡು ದನಗಳ ಮೊಲೆ ಹಾಲು ಕುಡಿದು ಮುದ್ದಿನಿಂದ ಬೆಳೆದಿದೆ. ಇದನ್ನು ಶುಕ್ರವಾರದಂದು ಮೇಯಲು ಗುಡ್ಡಕ್ಕೆ ಬಿಡಲಾಗಿತ್ತು. ಎತ್ತರವಾದ ಗುಡ್ಡದಲ್ಲಿ ಕಿವಿಗೆ ಗಾಳಿ ಸೋಕಿದಂತಾಗಿ ಜಿಗಿಯತೊಡಗಿದ ದನಕ್ಕೆ ಅಪಾಯದ ಅರಿವಾಗದೆ ೪೦ ಅಡಿ ಆಳದ ತೋಡಿಗೆ ಬಿದ್ದಿತ್ತು. ದನ ಬಿದ್ದ ಗುರುತು ಪತ್ತೆ ಹಚ್ಚಿದ ಮನೆ ಮಂದಿ ಇಷ್ಟೊಂದು ಆಳದಿಂದ ಬಿದ್ದ ಕಾರಣ ದನ ಬದುಕಿ ಉಳಿಯುವ ಸಾಧ್ಯತೆ ಇಲ್ಲವೆಂದು ದುಃಖೀತರಾಗಿ ತೋಡಿನಲ್ಲಿಯೇ ಹುಡುಕಾಟದಲ್ಲಿ ನಿರತರಾಗಿದ್ದರು.

ಈ ವೇಳೆ ಸಾಮಾಜಿಕ ಜಾಲ ತಾಣಗಳಲ್ಲಿ ಉಪ್ಪಿನಂಗಡಿಯಲ್ಲಿ ನದಿಯಲ್ಲಿ ಕೊಚ್ಚಿ ಹೋಓಗುತ್ತಿದ್ದ ದನದ ರಕ್ಷಣೆ ಎಂಬ ಮಾಹಿತಿಯನ್ನು ಪಡೆದ ಮಂಗಳೂರಿನ ಮಹಿಳೆಯೋರ್ವರು ವಿಶ್ವನಾಥ ಗೌಡರಿಗೆ ಪೋನಾಯಿಸಿ ವಿಚಾರ ತಿಳಿಸಿದಾಗ ತಮ್ಮ ಮನೆಯ ದನವಾಗಿರಬಹುದೆಂದು ಅಂದಾಜಿಸಿ ಉಪ್ಪಿನಂಗಡಿಗೆ ದೌಡಾಯಿಸಿದರು. ಸಾವು ಬದುಕಿನ ನಡುವೆ ರಕ್ಷಿಸಲ್ಪಟ್ಟು ನಿತ್ರಾಣಗೊಂಡಿದ್ದ ದನ ತನ್ನ ಯಜಮಾನರನ್ನು ಕಂಡಾಕ್ಷಣ ಭಾವಪರವಶತೆಗೆ ಒಳಗಾದ ವರ್ತನೆ ತೋರಿತು.

ದನ ಬದುಕಿ ಉಳಿದ ಸಂತಸದಿಂದ ಕಣ್ಣೀರ ಧಾರೆ ವಿಶ್ವನಾಥರಲ್ಲಿ ವ್ಯಕ್ತವಾಯಿತು. ತಮ್ಮ ಪ್ರೀತಿಯ ದನವನ್ನು ರಕ್ಷಿಸಿದ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಹೃದಯಸ್ಪರ್ಶಿ ಧನ್ಯವಾದ ಸಲ್ಲಿಸಿ ಬಳಿಕ ದನವನ್ನು ವಾಹನವೊಂದರಲ್ಲಿ ಕರೆದೊಯ್ಯಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!