ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ನಟಿ ಭಾವನಾ ಮಲಯಾಳಂ, ತಮಿಳು ಮತ್ತು ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದಾದ ಬಳಿಕ ಕನ್ನಡದ ನಿರ್ಮಾಪಕ ನವೀನ್ ಅವರನ್ನು ಮದುವೆಯಾದರು.
ಇದೀಗ ಹಲವು ದಿನಗಳ ವಿರಾಮದ ಬಳಿಕ ಮತ್ತೆ ಮಲಯಾಳಂ ಸಿನಿರಂಗಕ್ಕೆ ಮರಳಿದ್ದಾರೆ ಮುಂಬರುವ ‘ಹಂಟ್’ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ.
ಸಿನಿಮಾ ಬಿಡುಗಡೆ ಹತ್ತಿರದಲ್ಲಿದ್ದು, ಈ ಸಂದರ್ಭ ಭಾವನಾ ಕೆಲ ಮನಸ್ಸಿನ ಮಾತುಗಳು ಹೇಳಿಕೊಂಡಿದ್ದಾರೆ
ಆಗಾಗ ನಾನು ಮಾನಸಿಕವಾಗಿ ಸುಸ್ತಾಗುತ್ತೇನೆ. ಈ ಮಾನಸಿಕ ಚಂಚಲತೆ ಇನ್ನೂ ಅಂತ್ಯ ಕಂಡಿಲ್ಲ ಎಂದು ಅಳಲು ತೋಡಿಕೊಂಡಿರುವ ಭಾವನಾ, ನಾವು ಯಾರನ್ನೂ ಹೊರಗಿನಿಂದ ನಿರ್ಣಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನಗುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಅಥವಾ ಸಂತೋಷದ ಕ್ಷಣವನ್ನು ಹಂಚಿಕೊಂಡ ಮಾತ್ರಕ್ಕೆ ಅವರು ಸಂತೋಷವಾಗಿದ್ದಾರೆ ಎಂದು ಊಹಿಸಲು ಸಾಧ್ಯವಿಲ್ಲ. ನಗುವಿನ ಹಿಂದೆ ನೋವಿರುತ್ತದೆ. ಜೀವನದಲ್ಲಿ ಯಾವಾಗಲೂ ಸಂತೋಷವೇ ತುಂಬಿರುವುದಿಲ್ಲ ಎಂದು ಭಾವನಾ ನೋವಿನ ಮಾತುಗಳನ್ನಾಡಿದ್ದಾರೆ.
ಇದೇ ಸಂದರ್ಭ ಭಾವನಾ ಅವರು ತನ್ನ ತಂದೆಯ ಸಾವನ್ನು ನೆನಪಿಸಿಕೊಂಡರು. ತಮ್ಮ ತಂದೆಯ ಮರಣವು ತುಂಬಾ ದುಃಖಕರ ಸಂಗತಿಯಾಗಿದೆ. ಆ ನೋವು ಇನ್ನೂ ಇದೆ. ನಾನು ಸಾಯುವವರೆಗೂ ಆ ನೋವು ಬದಲಾಗುವುದಿಲ್ಲ ಎಂದು ಭಾವನಾ ಹೇಳಿಕೊಂಡಿದ್ದಾರೆ.
ನಾನು ನನ್ನ ದುಃಖವನ್ನು ಎಲ್ಲಿಯೂ ತೋರಿಸುವುದಿಲ್ಲ. ಏಕೆಂದರೆ ಜನರು ಅದನ್ನು ಹೇಗೆ ನಿರ್ಣಯಿಸುತ್ತಾರೆಂದು ನಿಮಗೆ ತಿಳಿದಿಲ್ಲ. ಬದುಕಿನ ನೋವು ಸಾಯುವವರೆಗೂ ಹಾಗೆಯೇ ಇರುತ್ತದೆ ಎಂದು ಹೇಳಿಕೊಂಡರು.
ಭಾವನಾ ನಟನೆಯ ಹಂಟ್ ಸಿನಿಮಾ ಆಗಸ್ಟ್ 9 ರಂದು ತೆರೆಗೆ ಬರಲಿದೆ. ಶಾಜಿ ಕೈಲಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಭಾವನಾ ಜೊತೆ ಅದಿತಿ ರವಿ ಮತ್ತು ರಾಹುಲ್ ಮಾಧವ್ ನಟಿಸಿದ್ದಾರೆ. ಅಲ್ಲದೆ, ಅಜ್ಮಲ್ ಅಮೀರ್, ಅನು ಮೋಹನ್, ಚಂತುನಾಥ್, ರಣಜಿ ಪಣಿಕ್ಕರ್. ಡೇನ್ ಡೇವಿಡ್, ನಂದು, ವಿಜಯಕುಮಾರ್, ಬಿಜು ಪಪ್ಪನ್, ಜಿ.ಸುರೇಶ್ ಕುಮಾರ್, ಕೊಟ್ಟಾಯಂ ನಾಸೀರ್, ಪದ್ಮರಾಜ್ ರತೀಶ್ ಮುಂತಾದವರು ಕೂಡ ಚಿತ್ರದಲ್ಲಿದ್ದಾರೆ.