ಹೊಸದಿಗಂತ ವರದಿ,ಅಂಕೋಲಾ :
ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದ ಪರಿಣಾಮವಾಗಿ ಸಂತ್ರಸ್ತರಾದ ಪಕ್ಕದ ದಂಡೆಯ ಉಳುವರೆ ಗ್ರಾಮದ ಸಂತ್ರಸ್ಥ ವಿದ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಾಠೋಪಕರಣ ಹಾಗೂ ಅಗತ್ಯ ಸಾಮಗ್ರಿಗಳ ನೆರವು ನೀಡಿದರು.
ಗುಡ್ಡ ಕುಸಿತದ ಪರಿಣಾಮ ನದಿಯ ವಿರುದ್ಧ ದಿಕ್ಕಿನ ದಂಡೆಯ ಉಳುವರೆ ಗ್ರಾಮದಲ್ಲಿವತೀವ್ರ ಹಾನಿ ಆಗಿತ್ತು.
ಯಾವೊಂದು ಶಾಲಾ ಸಾಮಗ್ರಿಗಳು ಕೂಡ ಇರದೇ ಗ್ರಾಮದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂತ್ರಸ್ತರಾಗಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆಯವರು ತಮ್ಮ ಜಿಲ್ಲಾ ಸಮಿತಿ ಸದಸ್ಯರು, ತಾಲೂಕು ಅಧ್ಯಕ್ಷರು ಹಾಗೂ ತಮ್ಮ ಆಪ್ತ ಗೆಳೆಯರು, ದಾನಿಗಳಿಂದ ಒಂದಿಷ್ಟು ಶಾಲಾ ಸಾಮಗ್ರಿಗಳನ್ನು ಸಂಗ್ರಹಿಸಿ ಶುಕ್ರವಾರ ಅದನ್ನ ಸಂತ್ರಸ್ತ ವಿದ್ಯಾರ್ಥಿಗಳಿಗೆ ವಿತರಿಸಿದರು. ಸಂತ್ರಸ್ತ ವಿದ್ಯಾರ್ಥಿಗಳ ಜೊತೆಗೆ ಉಳುವರೆ ಶಾಲೆಯ 55 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ಕೂಡ ನೋಟ್ ಬುಕ್, ಎಕ್ಸಾಂ ಪೆಡ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ನೀಡಿದರು. 30 ಸಂತ್ರಸ್ತ ವಿದ್ಯಾರ್ಥಿಗಳಿಗೆ ನಗದು ಸಹಾಯವನ್ನೂ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆಯವರು ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಮ್ಮೇಳನ ಹಾಗೂ ಸಾಹಿತ್ಯದ ಕಾರ್ಯಕ್ರಮ ಸಂಘಟಿಸುವುದಕ್ಕಷ್ಟೇ ಸೀಮಿತವಾಗದೇ, ಅದು ಕಷ್ಟದಲ್ಲಿರುವ ಜನರ ನೋವಿನಲ್ಲಿಯೂ ಜೊತೆಯಾಗ ಬೇಕು. ಅಸಹಾಯಕರಿಗೆ ಸಹಾಯ ಮಾಡಬೇಕು ಎಂಬ ನಿಜ ಕಾಳಜಿಯೊಂದಿಗೆ ಈ ಸೇವಾ ಕಾರ್ಯ ಮಾಡಲಾಗಿದೆ. ಇಂತಹ ಕೆಲಸಗಳ ಮೂಲಕ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತಾಗಬೇಕೆಂಬುದೂ ಕೂಡಾ ನಮ್ಮ ಆಶಯ. ಜಿಲ್ಲೆಯ ಕಸಾಪ ಇತಿಹಾಸದಲ್ಲಿಯೇ ಮೊಟ್ಟ ಮೊದಲಿಗೆ ಸಾಹಿತ್ಯ ಪರಿಷತ್ತಿನಿಂದ ಇಂತಹದ್ದೊಂದು ಜನ ಸೇವಾ ಕಾರ್ಯ ನಡೆದಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸಂತ್ರಸ್ಥ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದು ನಿಜಕ್ಕೂ ಮಾನವೀಯ ಕಾರ್ಯವಾಗಿದೆ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಕಸಾಪ ಅಂಕೋಲಾ ತಾಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಹೊನ್ನಾವರ ತಾಲೂಕು ಘಟಕದ ಅಧ್ಯಕ್ಷ ಎಸ್. ಹೆಚ್ ಗೌಡ, ಜಿಲ್ಲಾ ಸಮಿತಿಯ ಸದಸ್ಯ ಡಾ. ವೆಂಕಟೇಶ ನಾಯ್ಕ, ಪಿ.ಎಮ್. ಮುಕ್ರಿ, ಹಿರಿಯ ಸಾಹಿತಿ ಬೀರಣ್ಣ ಎಂ. ನಾಯಕ, ಹಿರೇಗುತ್ತಿ, ಪ್ರಮುಖರಾದ ಪ್ರಕಾಶ ಕುಂಜಿ, ಎಂ.ಬಿ. ಆಗೇರ, ಸುಜಿತ್ ನಾಯ್ಕ, ಕಸಾಪ ಆಜೀವ ಸದಸ್ಯರು, ದಾಂಡೇಲಿಯ ಸಮಾಜ ಸೇವಕರು ಆದ ಎಸ್. ಪ್ರಕಾಶ ಶೆಟ್ಟಿ, ಟಿ. ಎಸ್. ಬಾಲಮಣಿ, ಮೋಹನ ಹಲವಾಯಿ, ಕೀರ್ತಿ ಗಾಂವಕರ, ಮುಸ್ತಾಕ ಶೇಖ್, ಅನಿಲ ದಂಡಗಲ, ಅನಿಲ ನಾಯ್ಕರ, ಫ್ರಾನ್ಸಿಸ್ ಮಸ್ಕರಿನಸ್, ವಾಸರಕುದ್ರಿಗೆ ಗ್ರಾ.ಪಂ. ಅಧ್ಯಕ್ಷ ಪ್ರದೀಪ ನಾಯಕ, ಶಾಲಾ ಶಿಕ್ಷಕಿ ಸಂಧ್ಯಾ ನಾಯ್ಕ ಮುಂತಾದವರು ಇದ್ದರು.