ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ಸೋಂಕಿನ ಅಬ್ಬರ ಹೆಚ್ಚಾಗಿದ್ದು, ಭಾನುವಾರವೂ 320 ಮಂದಿಗೆ ಸೋಂಕು ದೃಢಪಟ್ಟಿದ್ದು ಇದರೊಂದಿಗೆ ರಾಜ್ಯದ ಒಟ್ಟಾರೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ 17 ಸಾವಿರ ಗಡಿ ದಾಟಿದೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.
ನಿತ್ಯ ಸರಾಸರಿ 2,500 ಪರೀಕ್ಷೆ ನಡೆಸುತ್ತಿದ್ದ ಆರೋಗ್ಯ ಇಲಾಖೆಯು ಭಾನುವಾರ 1,630 ಮಂದಿಗೆ ಮಾತ್ರ ಪರೀಕ್ಷೆ ನಡೆಸಿದೆ. ಈ ಪೈಕಿ 320 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 17,227ಕ್ಕೆ ಏರಿಕೆಯಾಗಿದೆ.
ಭಾನುವಾರದ ಪ್ರಕರಣ ಸೇರಿ 3,004 ಮಂದಿ ಸಕ್ರಿಯ ಡೆಂಗ್ಯೂ ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ. ಈ ಪೈ 2,539 ಮಂದಿ ಮನೆಯಲ್ಲೇ ಚಿಕಿತ್ಸೆಯಲ್ಲಿದ್ದಾರೆ. 465 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 9 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ನಗರ ವ್ಯಾಪ್ತಿಯಲ್ಲಿ ಹಾಗೂ ಹೊರ ವಲಯದಲ್ಲಿ ರೋಗಗಳ ಹರಡುವಿಕೆಗೆ ಕಾರಣವಾದ ಸೊಳ್ಳೆ ಸಂತತಿಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಆದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ನಾಗರೀಕರು ದೂರಿದ್ದಾರೆ.