ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ವರ್ಷಗಳ ಬಳಿಕ ಭರ್ತಿಯಾಗಿರುವ ಕನ್ನಡಿಗರ ಜೀವನಾಡಿ ಕನ್ನಂಬಾಡಿ ಅಣೆಕಟ್ಟಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಬಾಗಿನ ಅರ್ಪಿಸಿದ್ದಾರೆ. ಈ ಮೂಲಕ ಅವರು ಮೂರನೇ ಬಾರಿಗೆ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ.
ಯಾವಾಗಲೂ ಜಲಾಶಯ ಭರ್ತಿಯಾದ ಅಥವಾ ಭರ್ತಿಯಾಗಿ 3ನೇ ದಿನ ಬಾಗಿನ ಸಲ್ಲಿಸುವುದು ವಾಡಿಕೆ. ಈ ಬಾರಿ ಜಲಾಶಯ ತುಂಬಿದ ಐದಾರು ದಿನಗಳ ಬಳಿಕ ಬಾಗಿನ ಸಲ್ಲಿಸಲಾಗುತ್ತಿದೆ.
ಸಿಎಂ, ಡಿಸಿಎಂಗೆ ಸಚಿವರಾದ ಎನ್.ಚಲುವರಾಯಸ್ವಾಮಿ, ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಕಾಂಗ್ರೆಸ್ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ತನ್ವೀರ್ ಸೇಠ್, ರವಿಕುಮಾರ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಇಂದು ನಡೆಯುವ ಬಾಗಿನ ಸಮಾರಂಭಕ್ಕೆ ಜಿಲ್ಲಾಡಳಿತ, ಕಾವೇರಿ ನೀರಾವರಿ ನಿಗಮ ಹಾಗೂ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವಾಡಿಕೆಯಂತೆ ಡಿಸಿಎಂ ಸೇರಿದಂತೆ ಸಚಿವರು ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದಾರೆ.