ಹೊಸದಿಗಂತ ವರದಿ,ಕಾರವಾರ:
ಕಾಳಿನದಿ ಯೋಜನೆ 1ನೇ ಹಂತ ಸೂಪಾ ಆಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿರುವುದರಿಂದ ಸೂಪಾ ಆಣೆಕಟ್ಟೆಯ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಿದೆ. ಹೀಗಾಗಿ ಜಿಲ್ಲಾ ನದಿಪಾತ್ರದ ಜನತೆಗೆ ಜಿಲ್ಲಾಡಳಿತ ಪ್ರವಾಹ ಮುನ್ಸೂಚನೆ ಹೊರಡಿಸಿದೆ.
ಸೂಪಾ ಜಲಾಶಯದ ಗರಿಷ್ಠ ಮಟ್ಟವು 564.00 ಮೀಟರ ಆಗಿದ್ದು, ಸೂಪಾ ಜಲಾಶಯದ ನೀರಿನ ಸಂಗ್ರಹಣ ಸಾಮರ್ಥ್ಯವು 147.55 ಟಿ.ಎಂ.ಸಿ ಆಗಿರುತ್ತದೆ. ಜಲಾಶಯದ ಇಂದಿನ ನೀರಿನ ಮಟ್ಟವು ಜು.29 ಬೆಳಿಗ್ಗೆ 8 ಗಂಟೆಗೆ551.60 (67.22%) ಮೀಟರ್ ಆಗಿದ್ದು 99.175 ಟಿ.ಎಂ.ಸಿ ಸಂಗ್ರಹಣವಾಗಿರುತ್ತದೆ. ಇದು ಜಲಾಶಯದ ಒಟ್ಟು ಸಾಮರ್ಥ್ಯದ 67.22% ಆಗಿರುತ್ತದೆ. ಈ ದಿನದ ಸೂಪಾ ಜಲಾಶಯದ ಒಳಹರಿವು ಸುಮಾರು 25,997 ಕ್ಯೂಸೆಕ್ಸ್ ಆಗಿರುತ್ತದೆ. ಇದೇ ರೀತಿಯಲ್ಲಿ ಜಲಾಶಯಕ್ಕೆ ನೀರಿನ ಒಳ ಹರಿವು ಮುಂದುವರೆದರೆ ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ. ಆದ್ದರಿಂದ ಆಣೆಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುವುದು.
ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ ಹಾಗೂ ಸೂಪಾ ಆಣೆಕಟ್ಟೆಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೂ ನಡೆಸದಂತೆ ವಿನಂತಿಸಲಾಗಿದೆ.
ಮನೆಗಳಿಗೆ ಹಾನಿ
ಉ.ಕ.ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 5 ಮನೆಗಳಿಗೆ ತೀವ್ರ ಹಾನಿ,12 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2 ಮತ್ತು ಕುಮಟಾ ದ 1 ಸೇರಿದಂತೆ ಒಟ್ಟು 3 ಕಾಳಜಿ ಕೇಂದ್ರಗಳಲ್ಲಿ 119 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.