ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿದ್ದರೆ , ಮುಂದಿನ ವರ್ಷ ನಡೆಯಲ್ಲಿರುವ ಏಷ್ಯಾಕಪ್ಗೆ ಭಾರತ ಆತಿಥ್ಯ ವಹಿಸುತ್ತಿದೆ
ಚಾಂಪಿಯನ್ಸ್ ಟ್ರೋಫಿಗೆ ಪಾಲ್ಗೊಳ್ಳಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ತೆರಳಲಿದೆಯೇ ಅಥವಾ ಇಲ್ಲವೇ ಎಂಬುದು ಭಾರಿ ಚರ್ಚೆ ಹುಟ್ಟುಹಾಕಿದೆ. ಒಂದೆಡೆ ಪಾಕಿಸ್ತಾನ ಕ್ರಿಕಟ್ ಮಂಡಳಿ, ನಾವು ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ನಮ್ಮ ತಂಡವನ್ನು ಕಳುಹಿಸಿದ್ದೇವು. ಹೀಗಾಗಿ ಇದೀಗ ಚಾಂಪಿಯನ್ಸ್ ಟ್ರೋಫಿ ಆಡಲು ಬಿಸಿಸಿಐ, ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂಬ ವಾದ ಮುಂದಿಟ್ಟಿದೆ. ಆದರೆ ಈ ನಿರ್ಧಾರವನ್ನು ಭಾರತ ಸರ್ಕಾರದ ಹೆಗಲಿಗೆ ಬಿಸಿಸಿಐ ಹೊರಿಸಿದೆ.
ಇದೆಲ್ಲದರ ಮುಂದಿನ ವರ್ಷ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಮುಂದಿನ ವರ್ಷ ನಡೆಯಲ್ಲಿರುವ ಏಷ್ಯಾಕಪ್ಗೆ ಭಾರತ ಆತಿಥ್ಯ ವಹಿಸುತ್ತಿರುವುದು.
ಭಾರತವು 2025 ರ ಪುರುಷರ ಏಷ್ಯಾಕಪ್ ಅನ್ನು ಆಯೋಜಿಸುವ ಹಕ್ಕು ಪಡೆದಿದೆ. ಈ ಟೂರ್ನಿ 20 ಓವರ್ಗಳ ಮಾದರಿಯಲ್ಲಿ ನಡೆಯಲಿದೆ. ಇದರಲ್ಲಿ 6 ತಂಡಗಳು ಭಾಗವಹಿಸಲಿದ್ದು, ಈಗಾಗಲೇ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಅರ್ಹತೆ ಪಡೆದುಕೊಂಡಿದ್ದು, ಆರನೇ ತಂಡವನ್ನು ಅರ್ಹತಾ ಸುತ್ತಿನ ಮೂಲಕ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಬೇಕಾಗುತ್ತದೆ.
ವಾಸ್ತವವಾಗಿ 2023 ರ ಏಷ್ಯಾಕಪ್ ಅನ್ನು ಆಯೋಜಿಸುವ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಆದರೆ ಈ ಟೂರ್ನಿಗಾಗಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಸರ್ಕಾರ ನಿರಾಕರಿಸಿತ್ತು. ಇದರಿಂದಾಗಿ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು. ಅದರ ಪ್ರಕಾರ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು.
ಏಷ್ಯಾ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದ IEOI ದಾಖಲೆಯ ಪ್ರಕಾರ, ಭಾರತವು 2025 ರಲ್ಲಿ ನಡೆಯಲ್ಲಿರುವ ಪುರುಷರ ಏಷ್ಯಾಕಪ್ಗೆ ಆತಿಥ್ಯ ವಹಿಸಲಿದೆ. ಈ ಟೂರ್ನಿ ಟಿ20 ಸ್ವರೂಪದಲ್ಲಿ ನಡೆಯಲ್ಲಿದೆ. ಅದೇ ಸಮಯದಲ್ಲಿ, 2027 ರ ಏಷ್ಯಾಕಪ್ ಆಯೋಜಿಸುವ ಹಕ್ಕನ್ನು ಬಾಂಗ್ಲಾದೇಶಕ್ಕೆ ನೀಡಲಾಗಿದೆ. ಆದರೆ 2027ರ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಈ ಎರಡೂ ಆವೃತ್ತಿಗಳಲ್ಲೂ ತಲಾ 13 ಪಂದ್ಯಗಳು ನಡೆಯಲಿವೆ. ವೇಳಾಪಟ್ಟಿ, ದಿನಾಂಕ, ಸ್ವರೂಪ ಮತ್ತು ಸ್ಥಳ ಸೇರಿದಂತೆ ಈ ಎಲ್ಲಾ ಮಾಹಿತಿಯನ್ನು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಕೂಡ ಬದಲಾಯಿಸಬಹುದು ಎಂದು ದಾಖಲೆಯಲ್ಲಿ ಹೇಳಲಾಗಿದೆ.